ತರಕಾರಿ ವಾಹನ ಪಲ್ಟಿ: ಮೂವರು ಮಹಿಳೆಯರು ಮೃತ್ಯು

ಬೆಂಗಳೂರು, ಎ.10: ತರಕಾರಿ ತುಂಬಿಕೊಂಡು ಶರವೇಗದಲ್ಲಿ ಸಾಗುತ್ತಿದ್ದ ಟಾಟಾ ಏಸ್ ವಾಹನ ಏಕಾಏಕಿ ಪಲ್ಪಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ತ್ಯಾವಕನಹಳ್ಳಿಯ ರಾಧಮ್ಮ(41), ಯಲ್ಲಮ್ಮ(49) ಹಾಗೂ ಪುಟ್ಟಮ್ಮ ಎಂಬವರು ಮೃತಪಟ್ಟಿರುವ ಮಹಿಳೆಯರು.
ಸೋಮವಾರ ರಾತ್ರಿ 7:30ರ ಸುಮಾರಿಗೆ ಕೊತ್ತಂಬರಿ ಸೊಪ್ಪು, ತರಕಾರಿ ತುಂಬಿಕೊಂಡು ಟಾಟಾ ಏಸ್ ವಾಹನ ಆನೇಕಲ್ ತಾಲೂಕಿನ ಬಾಗಲೂರು ಕಡೆಯಿಂದ ಸರ್ಜಾಪುರ ಪಟ್ಟಣದ ಕಡೆ ಸಾಗುತ್ತಿದ್ದ ವೇಳೆ ಬಾಗಲೂರು ಕ್ರಾಸ್ ಬಳಿ ಏಕಾಏಕಿ ವಾಹನ ಪಲ್ಟಿ ಆಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಟಾಟಾ ಏಸ್ ಚಾಲಕ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ನಡೆದಿದೆ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದು, ವಾಹನ ಚಾಲಕ ಘಟನೆ ಬಳಿಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಧಾವಿಸಿರುವ ಸರ್ಜಾಪುರ ಠಾಣಾ ಪೊಲೀಸರು ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ.





