ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ: ಆಣೆ-ಪ್ರಮಾಣದ ಅಗತ್ಯವಿಲ್ಲ; ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಎ.10: ರಾಜ್ಯಸಭೆ ಚುನಾವಣೆಯಲ್ಲಿ ಕೆಲವು ಶಾಸಕರು ಅಡ್ಡ ಮತದಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೆ ರೀತಿಯ ಆಣೆ- ಪ್ರಮಾಣ ಮಾಡುವ ಅಗತ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿನ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಮಾಜಿ ಶಾಸಕರಾದ ಸುರೇಶ್‌ಗೌಡ ಹಾಗೂ ಎಲ್.ಆರ್.ಶಿವರಾಮೇಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು.
ಕೆಲವರಿಗೆ ಹಣವೇ ಮುಖ್ಯವಾಗಿರುತ್ತದೆ ಆದುದರಿಂದ, ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಲು ಕುಮಾರಸ್ವಾಮಿಯೇ ಹೇಳಿದ್ದರು ಎಂದು ತನ್ನ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ತಾನು ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ಇಚ್ಛಿಸುವುದಿಲ್ಲ ಎಂದು ಶಾಸಕ ಝಮೀರ್ ಅಹ್ಮದ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಜೊತೆಯಲ್ಲಿ ಹತ್ತಾರು ವರ್ಷವಿದ್ದು, ಎಲ್ಲವನ್ನು ಅನುಭವಿಸಿದವರು ಇಂದು ಪಕ್ಷ ಬಿಟ್ಟಿದ್ದಾರೆ. ಆದರೆ, ಇದಕ್ಕೆಲ್ಲ ನಾವು ಎದೆಗುಂದುವ ಅಗತ್ಯವಿಲ್ಲ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ ನಮ್ಮ ಪಕ್ಷ ಇಂದಿಗೂ ಜೀವಂತವಿದೆ ಎಂದು ಅವರು ಹೇಳಿದರು.
ಸಿಎಂ ವಿರುದ್ಧ ಕಿಡಿ: ರಾಜ್ಯದಲ್ಲಿ ಸತತವಾಗಿ ಬರಗಾಲ ಕಾಡುತ್ತಿದ್ದರೂ ರೈತರ ಕಲ್ಯಾಣಕ್ಕೆ ಯಾವುದೆ ರೀತಿಯ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಲ್ಲ. ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ರಾಜಾರೋಷವಾಗಿ ಪೊಲೀಸರು, ಅಧಿಕಾರಿಗಳ ವಾಹನಗಳಲ್ಲಿ ಹಣವನ್ನು ಸಾಗಾಟ ಮಾಡಿ, ಜನರಿಗೆ ಹಂಚಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲು ಸರಕಾರಕ್ಕೆ ಸಾಧ್ಯವಿಲ್ಲ. ಆದರೆ, ಚುನಾವಣೆಯಲ್ಲಿ ಮತದಾರರಿಗೆ ಹಣವನ್ನು ಹಂಚಿಕೆ ಮಾಡಿದ್ದಾರೆ. ಇದು ಈ ಸರಕಾರದ ವರ್ತನೆ. ರಾಜ್ಯ ಹಾಗೂ ರೈತರನ್ನು ಉಳಿಸಲು ರಾಷ್ಟ್ರೀಯ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.







