ಬರ ಪರಿಹಾರಕ್ಕೆ ಕೇಂದ್ರದಿಂದ ಸ್ಪಂದನೆ ಇಲ್ಲ: ಡಾ.ಜಿ.ಪರಮೇಶ್ವರ್

ತುಮಕೂರು, ಎ.10: ಮೂರು ವರ್ಷಗಳಿಂದ ರಾಜ್ಯವು ಸತತ ಬರಗಾಲಕ್ಕೆ ತುತ್ತಾದರೂ ಕೇಂದ್ರ ಸರಕಾರದಿಂದ ಸ್ಪಂದನೆ ದೊರೆತ್ತಿಲ್ಲ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ನ 28ನೇ ಶಾಖೆ ಮತ್ತು ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಬರದಿಂದಾಗಿ ಸುಮಾರು 14 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಆದರೆ ಕೇವಲ 1,280 ಕೋಟಿ ರೂ. ನೀಡುವ ಭರವಸೆಯನ್ನು ಮಾತ್ರ ಕೇಂದ್ರ ಸರಕಾರ ನೀಡಿದೆ. ಅಲ್ಲದೆ ರೈತರ ಬೆಳೆ ಸಾಲ ಮನ್ನಾ ಮಾಡಲು ಸಹ ಹಿಂದೇಟು ಹಾಕುತ್ತಿದೆ. ಕೇಂದ್ರ ಸರಕಾರ ವಾಣಿಜ್ಯ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡಿದರೆ, ರಾಜ್ಯದಲ್ಲಿ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡಲು ಈಗಾಗಲೇ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಗಮನಹರಿಸಬೇಕೆಂದರು.
ಬಯಲು ಸೀಮೆಯ ಪ್ರದೇಶಕ್ಕೆ ಶಾಶ್ವತ ನೀರಾವರಿ ಎತ್ತಿನಹೊಳೆ ಯೋಜನೆಗೆ ರಾಜ್ಯ ಸರಕಾರವು 13 ಸಾವಿರ ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ತಾಲೂಕಿನ ಬೈರಗೊಂಡ್ಲು ಗ್ರಾಮದಲ್ಲಿ ಬೃಹತ್ ಬಫರ್ ಡ್ಯಾಂ ಶೀರ್ಘರದಲ್ಲೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದರು.
ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಹೆಚ್ಚು ಸ್ಪಂದಿಸುತ್ತಿದೆ, ರೈತರು ಮಳೆಯ ಅಭಾವದಿಂದ ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದು, ಜಿಲ್ಲಾ ಸಹಕಾರ ಬ್ಯಾಂಕ್ ಸರಕಾರದ ನೆರವಿಲ್ಲದೆ ಜನರ ಠೇವಣಿ ಹಾಗೂ ಇತರ ಲೀಡ್ ಸಹಕಾರ ಬ್ಯಾಂಕ್‌ಗಳಿಂದ ಸಾಲ ಪಡೆದು ರೈತರ ಸಂಕಷ್ಠಕ್ಕೆ ನಿಂತಿದೆ. ಈಗಾಗಲೆ ಡಿಸಿಸಿ ಬ್ಯಾಂಕ್ ರೈತರ 1 ಲಕ್ಷ ರೂ. ಸಾಲ ಮನ್ನಾ, ಮುಂಬರುವ ದಿನಗಳಲ್ಲಿ ರೈತರ ಸಾಲ ಮನ್ನಾ ದೃಷ್ಟಿಯಿಂದ ರೈತರಿಗೆ ವಿಶೇಷ 25 ಸಾಲ ನೀಡಿಕೆ ಹಾಗೂ ಮೃತ ರೈತರ ಕುಟುಂಬಕ್ಕೆ 6,31.72950 ಲಕ್ಷ ರೂ.ಗಳ ಸಾಲ ಮನ್ನಾ ಮಾಡಿದೆ ಎಂದರು.
ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿದರು.







