ಜಲಾಶಯಗಳ ನೀರನ್ನು ಕೃಷಿಗೆ ಬಳಸಬೇಡಿ: ರೈತರಿಗೆ ಸಚಿವ ಎಂ.ಬಿ.ಪಾಟೀಲ್ ಮನವಿ

ಬೆಂಗಳೂರು, ಎ. 10: ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಸ್ಥಿತಿ ಆವರಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಹೀಗಾಗಿ ಜಲಾಶಯ, ನದಿ, ಕೆರೆ, ಹಳ್ಳ, ಹೊಳೆ ನೀರನ್ನು ಯಾವುದೇ ಕಾರಣಕ್ಕೂ ಕೃಷಿಗೆ ಬಳಸಬೇಡಿ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ರೈತರಿಗೆ ಮನವಿ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಕಾವೇರಿ ನೀರಾವರಿ ನಿಗಮ, ಕರ್ನಾಟಕ ನೀರಾವರಿ ನಿಗಮ, ಕೃಷ್ಣ ಜಲಭಾಗ್ಯ ನಿಗಮ ಸೇರಿದಂತೆ ಜಲ ಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಬರ ಸ್ಥಿತಿ ಹಿನ್ನೆಲೆಯಲ್ಲಿ ಎಲ್ಲ ಜಲಾಶಯಗಳಲ್ಲಿನ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಲು ಸರಕಾರ ತೀರ್ಮಾನಿಸಿದೆ ಎಂದ ಅವರು, ಜೂನ್ 15ರ ವರೆಗೆ ಬೆಂಗಳೂರು ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿರುವುದರಿಂದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು, ನೀರು ಪೋಲು ಮಾಡುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದ ಅವರು, ರಾಜ್ಯದ ರೈತರು ಮತ್ತು ಜನ ಸಾಮಾನ್ಯರು ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಸಹಕರಿಸಬೇಕು ಎಂದು ಕೋರಿದರು.
ಏಳು ಟಿಎಂಸಿ: ಕೆಆರ್‌ಎಸ್-4.4, ಕಬಿನಿ-0.295, ಹಾರಂಗಿ-1.228, ಹೇಮಾವತಿ-1.787 ಟಿಎಂಸಿ ನೀರು ಸೇರಿದಂತೆ ಒಟ್ಟು 7.748 ಟಿಎಂಸಿ ನೀರಿದೆ. ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಮಾಸಿಕ 3 ಟಿಎಂಸಿಯಷ್ಟು ನೀರು ಅಗತ್ಯ. ಹೀಗಾಗಿ ಬೆಂಗಳೂರಿಗೆ ಪ್ರತಿನಿತ್ಯ 600 ಕ್ಯೂಸೆಕ್ಸ್ ನೀರಿನ ಅಗತ್ಯವಿದ್ದು, ಇನ್ನೂ 60 ದಿನಗಳಿಗೆ ಸಾಕಾಗುವಷ್ಟು ನೀರಿದೆ. ಜೂನ್ 15ರ ವರೆಗೆ ಕುಡಿಯುವ ನೀರಿಗೆ ಆತಂಕಪಡುವ ಅಗತ್ಯವಿಲ್ಲ. ಪ್ರಸ್ತುತ ಜಲಾಶಯಗಳಲ್ಲಿರುವ ಎಲ್ಲ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಲು ನಿರ್ಧರಿಸಿದ್ದೇವೆ ಎಂದರು.
ಆಲಮಟ್ಟಿ ಜಲಾಶಯದಲ್ಲಿ 12 ಟಿಎಂಸಿ ನೀರಿದ್ದು, ಆ ಪೈಕಿ 8.28 ಟಿಎಂಸಿ ಬಳಕೆಗೆ ಯೋಗ್ಯವಾಗಿದೆ. ನಾರಾಯಣಪುರ-13 ಟಿಎಂಸಿ ನೀರಿದ್ದು, ಆರ್‌ಟಿಪಿಎಲ್ ವಿದ್ಯುತ್ ಉತ್ಪಾದನಾ ಘಟಕ ಸೇರಿದಂತೆ ರಾಯಚೂರಿಗೆ ಕುಡಿಯುವ ನೀರಿಗೆ 5.9 ಟಿಎಂಸಿ ನೀರಿನ ಅಗತ್ಯವಿದೆ. ಹಿಡಕಲ್-7.65 ಟಿಎಂಸಿ, ಹಿಪ್ಪರಗಿ-0.8ಟಿಎಂಸಿ, ಮಲಪ್ರಭ-1.7ಟಿಎಂಸಿ, ತುಂಗಭದ್ರಾ-3.7ಟಿಎಂಸಿ ನೀರಿದ್ದು, ಆ ಪೈಕಿ 1.7 ಟಿಎಂಸಿಯಷ್ಟು ಕುಡಿಯುವ ನೀರು ಮತ್ತು ಆಂಧ್ರ 0.5ಟಿಎಂಸಿ ನೀರನ್ನು ಬಳಕೆ ಮಾಡಲಿದೆ. ಸಿಂಗಟಾಲೂರು ಏತ ನೀರಾವರಿ-0.8ಟಿಎಂಸಿ ನೀರಿದ್ದು, ಆ ಪೈಕಿ 0.46 ಟಿಎಂಸಿ ನೀರನ್ನು ಬಳಕೆಗೆ ಯೋಗ್ಯವಾಗಿದೆ. ಹೀಗಾಗಿ ಭದ್ರದಿಂದ ನೀರನ್ನು ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.







