ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲು ಶ್ರೀನಿವಾಸನ್, ನಿರಂಜನ್ ಶಾ ಸಿದ್ಧತೆ
ಸುಪ್ರೀಂಕೋರ್ಟ್‌ನಲ್ಲಿ ಸ್ಪಷ್ಟನೆ ಕೇಳಿದ ಸಿಇಎ
ಹೊಸದಿಲ್ಲಿ, ಎ.10: ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಯಾವುದೇ ಹುದ್ದೆಯಲ್ಲಿರಲು ಅನರ್ಹವಾಗಿರುವ ವ್ಯಕ್ತಿ ಎ.24 ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸಲು ಸಾಧ್ಯವೇ? ಎಂದು ಸ್ಪಷ್ಟಪಡಿಸುವಂತೆ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಜಸ್ಟಿಸ್ ದೀಪಕ್ ಮಿಶ್ರಾ, ಎಎಂ ಖಾನ್ವಿಲ್ಕರ್ ಹಾಗೂ ಡಿವೈ ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಸುಪ್ರೀಂನಿಂದಲೇ ನೇಮಿಸಲ್ಪಟ್ಟ ಸಿಒಎ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಎ.17ಕ್ಕೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.
ಸುಪ್ರೀಂಕೋರ್ಟ್ ಎತ್ತಿಹಿಡಿದಿರುವ ಜಸ್ಟಿಸ್ ಆರ್‌ಎಂ ಲೋಧಾ ವರದಿಯ ಶಿಫಾರಸಿನಂತೆ 70ಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿ ಬಿಸಿಸಿಐ ಹಾಗೂ ರಾಜ್ಯ ಸಂಸ್ಥೆಗಳಲ್ಲಿ ಯಾವುದೇ ಹುದ್ದೆಯಲ್ಲಿರುವಂತಿಲ್ಲ. ಸುಪ್ರೀಂಕೋರ್ಟಿನ ತೀರ್ಪಿನಂತೆ ಅನರ್ಹರಾಗಿರುವ ಎನ್.ಶ್ರೀನಿವಾಸನ್ ಹಾಗೂ ನಿರಂಜನ್ ಶಾ ಸಂಬಂಧಿತ ರಾಜ್ಯ ಸಂಸ್ಥೆಗಳಿಂದ ಐಸಿಸಿ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಗಳಾಗಿ ನಾಮ ನಿರ್ದೇಶನಗೊಂಡಿದ್ದಾರೆ ಎಂದು ಸಿಒಎ ನ್ಯಾಯಾಲಯಕ್ಕೆ ತಿಳಿಸಿದೆ.
ಬಿಸಿಸಿಐ ಹಾಗೂ ರಾಜ್ಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುವ ವ್ಯಕ್ತಿ ಐಸಿಸಿ ಸಭೆಯಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸಲು ಹೇಗೆ ಸಾಧ್ಯ? ವ್ಯಕ್ತಿಯೊಬ್ಬ ಅನರ್ಹನಾದರೆ ಆತ ಯಾವಾಗಲೂ ಅನರ್ಹನೇ ಆಗಿರುತ್ತಾನೆ. ಬಿಸಿಸಿಐ ಹುದ್ದೆಯಲ್ಲಿಬೇಕಾದರೆ 70 ವರ್ಷ ಮೀರಿರಬಾರರೆಂದು ಇದೇ ನ್ಯಾಯಾಲಯದಲ್ಲಿ ಈ ಹಿಂದಿನ ತೀರ್ಪಿನಲ್ಲಿ ತಿಳಿಸಲಾಗಿದೆ. ನಮ್ಮ ಆದೇಶವನ್ನು ನಾವು ಉಲ್ಲಂಘಿಸಲಾರೆವು’’ ಎಂದು ಸುಪ್ರೀಂಕೋರ್ಟ್ ಹೇಳಿದೆ.







