ಗೋ ಜಾಗೃತಿ ಭಾರತದ ಐಸಿಸ್: ಸುರ್ಜಿತ್ ಭಲ್ಲಾ
ಹೊಸದಿಲ್ಲಿ, ಎ.10: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಕಳೆದ ವಾರ ಹೈನುಗಾರಿಕೆಗೆ ಹಸು ಸಾಗಿಸುತ್ತಿದ್ದ ರೈತನ ಮೇಲೆ ಗೋರಕ್ಷಕರು ದಾಳಿ ನಡೆಸಿರುವುದು ಐಸಿಸ್ ಪ್ರತಿಪಾದಿಸುವ ಮತಾಂಧತೆಗಿಂತ ಭಿನ್ನವೇನೂ ಅಲ್ಲ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ಹೇಳಿದ್ದಾರೆ.
ಎನ್‌ಡಿಟಿವಿ ಡಯಲಾಗ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಥ ಅವಿವೇಕತನದ ಕೃತ್ಯದ ಪರವಾಗಿ ಯಾರೂ ಇರಲಾರರು. ಗೋಹತ್ಯೆ ಜಾಗೃತಿ ಎನ್ನುವುದು ಭಾರತದ ಐಸಿಸ್ ಆಗಿದೆ. ಯಾವ ವ್ಯಕ್ತಿ ಕೂಡಾ ಹಸುವಿನ ಹೆಸರಿನಲ್ಲಿ ಅದನ್ನು ಸಮರ್ಥಿಸಿಕೊಳ್ಳಲಾಗದು. ಇದು ಭಯಾನಕ ಎಂದು ಹೇಳಿದರು.
ಭಾರತದಲ್ಲಿ ಬಡತನ ವಿರುದ್ಧದ ಹೋರಾಟ ಎಂಬ ಚರ್ಚೆಯ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಅಕ್ರಮ ಕಸಾಯಿಖಾನೆಗಳ ವಿರುದ್ಧ ಕೈಗೊಂಡ ದಾಳಿಯಿಂದ ಅಲ್ಪಸಂಖ್ಯಾತ ಸಮುದಾತದ ಮೇಲೆ ಉತ್ತರ ಪ್ರದೇಶದಲ್ಲಿ ಉಂಟಾಗಬಹುದಾದ ಆರ್ಥಿಕ ಪರಿಣಾಮಗಳ ಬಗ್ಗೆ ಅವರು ಮಾತನಡಿದರು. ಮತ್ತೊಬ್ಬ ಖ್ಯಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮಾತನಾಡಿ, ಅಕ್ರಮ ಕಸಾಯಿಖಾನೆಗಳ ಮೇಲೆ ಸರಕಾರ ನಡೆಸಿದ ದಾಳಿ ಯರ್ರಾಬಿರ್ರಿ. ಅದು ಜನರ ಜೀವನದ ಹಕ್ಕನ್ನು ದಿಢೀರನೇ ಕಸಿದುಕೊಂಡಂತೆ. ನನಗೆ ಬಡತನವಿರಲಿ ಅಥವಾ ಇಲ್ಲದಿರಲಿ ಅದನ್ನು ವಿರೋಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಡತನ ನಿರ್ಮೂಲನೆ ಬಗ್ಗೆ ಮಾತನಾಡಿದ ಡಾ.ಭಲ್ಲಾ, ಈ ವಿಚಾರದಲ್ಲಿ ಭಾರತದ ಸಾಧನೆ ವಿಶ್ವದಲ್ಲೇ ಉತ್ತಮವಾಗಿದ್ದು, ಆದರೆ ಬಡತನ ಮಟ್ಟವನ್ನು ಸಮರ್ಪಕವಾಗಿ ಅಳೆಯುವ ಕೆಲಸ ಆಗಿಲ್ಲ ಎಂದು ಪ್ರತಿಪಾದಿಸಿದರು.





