ಅನಂತನಾಗ್ ಉಪಚುನಾವಣೆ ಮೇ 25ಕ್ಕೆ ಮುಂದೂಡಿಕೆ
ಶ್ರೀನಗರ, ಎ.10: ಇಲ್ಲಿ ರವಿವಾರ ನಡೆದ ಚುನಾವಣಾ ಹಿಂಸಾಚಾರದಲ್ಲಿ ಎಂಟು ನಾಗರಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಎಪ್ರಿಲ್ 12ರಂದು ನಿಗದಿಯಾಗಿದ್ದ ಅನಂತನಾಗ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಮೇ 25ಕ್ಕೆ ಮುಂದೂಡಲಾಗಿದೆ.
ರವಿವಾರ ಆರಂಭವಾದ ಗಲಭೆ ಸೋಮವಾರ ಕುಲ್‌ಗಾಂವ್, ಪುಲ್ವಾಮಾ, ಶೊಪಿಯಾನ್ ಮತ್ತು ಅನಂತ್‌ನಾಗ್ ಜಿಲ್ಲೆಗಳಿಗೂ ಹಬ್ಬಿದ ಕಾರಣ ಚುನಾವಣೆಯನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯ ಸೋದರ, ಅನಂತ್‌ನಾಗ್ ಕ್ಷೇತ್ರದಲ್ಲಿ ಪಿಡಿಪಿ ಅಭ್ಯರ್ಥಿಯಾಗಿರುವ ತಸಾದಕ್ ಮುಫ್ತಿ, ಉಪಚುನಾವಣೆಯನ್ನು ಮುಂದೂಡುವಂತೆ ಕೋರಿಕೆ ಸಲ್ಲಿಸಿದ್ದರು. ಎಪ್ರಿಲ್ 12ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡುವ ಸಲುವಾಗಿ ಕಣದಿಂದ ಹಿಂದೆ ಸರಿಯಲೂ ಸಿದ್ಧ ಎಂದು ಅವರು ಘೋಷಿಸಿದ್ದರು.
ಜಿಲ್ಲೆಯಲ್ಲಿ ಚುನಾವಣೆ ನಡೆಸಲು ಯೋಗ್ಯವಾದ ವಾತಾವರಣ ಇಲ್ಲ. ಈ ಹಿನ್ನೆಲೆಯಲ್ಲಿ ಮತದಾನ ಮುಂದೂಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಮುಫ್ತಿ ಮಾಡಿಕೊಂಡಿರುವ ಈ ಮನವಿಯಿಂದ ಅವರ ಸಹೋದರಿ ಮೆಹಬೂಬ ಮುಫ್ತಿ ಸರಕಾರ ಹಾಗೂ ಅದರ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ ಎಂದು ವಿರೋಧ ಪಕ್ಷದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಲೇವಡಿ ಮಾಡಿದ್ದಾರೆ.
ಶ್ರೀನಗರ ಲೋಕಸಭೆ ಕ್ಷೇತ್ರದ ಮತಗಟ್ಟೆಯ ಮೇಲೆ ದಾಳಿ ಮಾಡಿ ಇಲೆಕ್ಟ್ರಾನಿಕ್ ಮತಯಂತ್ರವನ್ನು ಹಾನಿ ಮಾಡಲು ಮುಂದಾದ ಗುಂಪಿನ ಮೇಲೆ ಸೇನೆಯ ಯೋಧರು ಗುಂಡು ಹಾರಿಸಿದಾಗ ಎಂಟು ಮಂದಿ ನಾಗರಿಕರು ಮೃತಪಟ್ಟಿದ್ದರು. ಪ್ರತ್ಯೇಕತಾವಾದಿಗಳು ಈ ಚುನಾವಣೆಯ ಬಹಿಷ್ಕಾರಕ್ಕೆ ಕರೆ ನೀಡಿದ್ದು ಮಾತ್ರವಲ್ಲದೇ, 200ಕ್ಕೂ ಹೆಚ್ಚು ಹಿಂಸಾಚಾರ ಘಟನೆಗಳು ಮತದಾನದ ವೇಳೆ ವರದಿಯಾಗಿದ್ದವು. ಕೇವಲ ಶೇ.7ರಷ್ಟು ಮಂದಿ ಮಾತ್ರ ಮತ ಚಲಾಯಿಸಿದ್ದು, ಇದು 30 ವರ್ಷಗಳಲ್ಲೇ ಕನಿಷ್ಠ ಮತದಾನವಾಗಿತ್ತು.
ಶನಿವಾರ ನಾಗರಿಕರ ಹತ್ಯೆಯಾದ ಹಿನ್ನೆಲೆಯಲ್ಲಿ ಎರಡು ದಿನಗಳ ಸಂಪೂರ್ಣ ಬಂದ್ ಹಾಗೂ ಪ್ರತಿಭಟನೆಗೆ ಪ್ರತ್ಯೇಕತಾವಾದಿ ಸಂಘಟನೆಗಳು ಕರೆ ನೀಡಿವೆ. ಕಾಶ್ಮೀರ ಕಣಿವೆಯ ಎಲ್ಲ ಶಾಲಾ ಕಾಲೇಜುಗಳು ಮತ್ತು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಅನಂತ್‌ನಾಗ್ ಕ್ಷೇತ್ರ ಮುಫ್ತಿ ಕುಟುಂಬದ ಪ್ರಬಲ ನೆಲೆಯಾಗಿದೆ. ಮುಫ್ತಿ ಮುಹಮ್ಮ್ಮದ್ ಸಯೀದ್ ಅವರ ನಿಧನದ ಬಳಿಕ ಮೆಹಬೂಬ ಮುಫ್ತಿಯವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರ ತೆರ ವಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿಕೂಟ ಆಡಳಿತದ ಚುಕ್ಕಾಣಿ ಹಿಡಿದಿದೆ.





