ಎರಡು ದಿನ ಒಡಿಶಾದಲ್ಲಿ ಸಾಮಾಜಿಕ ಜಾಲತಾಣ ಬಂದ್
ಭದ್ರಕ್ ಹಿಂಸಾಚಾರ
ಭದ್ರಕ್(ಒಡಿಶಾ), ಎ.10: ಹಿಂದೂ ದೇವತೆಗಳ ವಿರುದ್ಧ ಅವಮಾನಕಾರಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂಬ ಕಾರಣಕ್ಕೆ ಕಳೆದ ವಾರ ವ್ಯಾಪಕ ಹಿಂಸಾಚಾರ ನಡೆದಿದ್ದ ಈ ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರಾಜ್ಯ ಸರಕಾರ ಹೇಳಿಕೊಂಡಿದ್ದರೂ, ಎರಡು ದಿನಗಳ ಕಾಲ ರಾಜ್ಯದಲ್ಲಿ ಎಲ್ಲ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲಾಗಿದೆ. ಹಿಂಸಾಚಾರ ಮರುಕಳಿಸದಂತೆ ತಡೆಯುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಈ ನಿಷೇಧ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸಾಕಷ್ಟು ವದಂತಿಗಳು, ನಕಲಿ ಫೋಟೊಗಳು ಚಲಾವಣೆಯಲ್ಲಿವೆ. ಈ ಕಾರಣದಿಂದ ಈ ನಿಷೇಧ ಹೇರಲಾಗಿದೆ ಎಂದು ಒಡಿಶಾ ಡಿಜಿಪಿ ಕೆ.ಬಿ.ಸಿಂಗ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕರ್ಫ್ಯೂ ಸಡಿಲಿಸಲಾಗಿದೆ. ಪರಿಸ್ಥಿತಿಯ ಪರಾಮರ್ಶೆ ನಡೆಸಿದಾಗ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಶನಿವಾರದಿಂದೀಚೆಗೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ನಿಷೇಧಾಜ್ಞೆಯನ್ನು ರವಿವಾರ ಬೆಳಗ್ಗೆ 8ರಿಂದ 11 ಗಂಟೆವರೆಗೆ ಸಡಿಲಿಸಲಾಗಿತ್ತು. ಅಗತ್ಯ ವಸ್ತುಗಳನ್ನು ಖರೀದಿಸುವ ಸಲುವಾಗಿ ಈ ವ್ಯವಸ್ಥೆಯನ್ನು ಮಧ್ಯಾಹ್ನದವರೆಗೆ ವಿಸ್ತರಿಸಲಾಗಿತ್ತು. ಬಳಿಕ ಕರ್ಫ್ಯೂ ಮುಂದುವರಿಸಲಾಗಿತ್ತು.
ಒಡಿಶಾ ಅಪರಾಧ ವಿಭಾಗದ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಎಲ್ಲ ವಾಟ್ಸ್ ಆ್ಯಪ್ ಮಾಹಿತಿಗಳನ್ನು ಅಪರಾಧ ವಿಭಾಗದ ಸೈಬರ್ ಘಟಕ ಪರಿಶೀಲನೆ ಮಾಡುತ್ತಿದೆ. ಎಲ್ಲ ಅಗತ್ಯ ಮಾಹಿತಿ ನೀಡುವಂತೆ ಗ್ರೂಪ್ ಅಡ್ಮಿನ್‌ಗೆ ಸೂಚನೆ ನೀಡಲಾಗಿದೆ ಎಂದು ಅಪರಾಧ ವಿಭಾಗದ ವಿಶೇಷ ಮಹಾನಿರ್ದೇಶಕ ಬಿ.ಕೆ.ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಸಂಬಂಧ 80 ಮಂದಿಯನ್ನು ಬಂಧಿಸಲಾಗಿದ್ದು, ಎಂಟು ಎಫ್‌ಐಆರ್ ದಾಖಲಿಸಲಾಗಿದೆ. ಹಿಂದೂ ದೇವತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದವು.
ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಪಡೆಯ 35 ತುಕಡಿಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಘಟನೆಯ ಬಗ್ಗೆ ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ಅವರಿಗೂ ಮನವರಿಕೆ ಮಾಡಲಾಗಿದೆ ಎಂದು ಅಂತಾರಾಜ್ಯ ಮಂಡಳಿ ಸ್ಥಾಯಿಸಮಿತಿ ಸಭೆಯಲ್ಲಿ ಭಾಗವಹಿಸಲು ದಿಲ್ಲಿಗೆ ತೆರಳಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.
ಹಿರಿಯ ಅಧಿಕಾರಿಗಳಾದ ಗೃಹ ಕಾರ್ಯದರ್ಶಿ ಅಸಿತ್ ತ್ರಿಪಾಠಿ ಹಾಗೂ ಡಿಜಿಪಿ ಕೆ.ಬಿ.ಸಿಂಗ್ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಶಾಂತಿ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಹಿರಿಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ.
ಯಾವುದೇ ಗುಂಪುಘರ್ಷಣೆ ನಡೆದಿಲ್ಲ ಅಥವಾ ಹಿಂಸಾಚಾರ ನಡೆದಿಲ್ಲ. ಕೆಲವರು ಕೋಮು ಸಾಮರಸ್ಯ ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಒಡಿಶಾ ಬಿಜೆಪಿ ಅಧ್ಯಕ್ಷ ಬಸಂತ್ ಪಾಂಡ ಹಾಗೂ ಮಾಜಿ ಶಾಸಕ ಪ್ರತಾಪ್ ಸಾರಂಗಿ ಅವರು ಆಡಳಿತಾರೂಢ ಬಿಜೆಡಿ ವೈಫಲ್ಯವನ್ನು ಖಂಡಿಸಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಸಿಎಂ ದಿಲ್ಲಿಯಲ್ಲಿ ಠಿಕಾಣಿ ಹೂಡಿರುವುದು ವಿಚಿತ್ರದ ಸಂಗತಿ ಎಂದು ಹೇಳಿದ್ದಾರೆ.





