ರಾಜಸ್ಥಾನದಲ್ಲೂ ಬಿಜೆಪಿಗೇ ಮತಹಾಕುವ ಮತಯಂತ್ರ ಪತ್ತೆ!
ಹೊಸದಿಲ್ಲಿ, ಎ.10: ದೋಷಯುಕ್ತ ಇಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು ಏಕೆ ಮತ್ತೆ ಮತ್ತೆ ಬಿಜೆಪಿ ಪರವಾಗಿಯೇ ಮತ ಚಲಾವಣೆ ಮಾಡುತ್ತವೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಆಜ್‌ತಕ್ ಸುದ್ದಿವಾಹಿನಿಯ ವರದಿಯನ್ನು ಉಲ್ಲೇಖಿಸಿ ಅವರು ಈ ಪ್ರಶ್ನೆ ಎಸೆದಿದ್ದಾರೆ. ದೋಷಯುಕ್ತ ಮತಯಂತ್ರಗಳು ಏಕೆ ಬಿಜೆಪಿಗೇ ಮತ ಚಲಾಯಿಸುತ್ತವೆ? ಏಕೆಂದರೆ ಅವು ದೋಷಯುಕ್ತವಲ್ಲ. ಅದರ ಸಾಫ್ಟ್‌ವೇರ್ ಬದಲಾಯಿಸಲಾಗಿದೆ. ಚುನಾವಣಾ ಆಯೋಗ ಒಂದು ಇವಿಎಂ ಅನ್ನು ನೀಡಲಿ. ಅದನ್ನು ತಿದ್ದಲಾಗಿದೆ ಎನ್ನುವುದನ್ನು ನಾವು ಸಾಬೀತುಪಡಿಸುತ್ತೇವೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಅವರು ಎಂಸಿಡಿ ಚುನಾವಣೆಗಳು ತಟಸ್ಥವಾಗಿರುತ್ತವೆಯೇ? ಈ ಯಂತ್ರಗಳನ್ನು ಚುನಾವಣಾ ಆಯೋಗ ಏಕೆ ಪರಿಶೀಲಿಸಿ ತನಿಖೆ ನಡೆಸುತ್ತಿಲ್ಲ? ಇಂಥ ಸ್ಥಿತಿಯಲ್ಲಿ ಚುನಾವಣೆ ನಡೆಸುವ ಅಗತ್ಯ ಏನು ಎಂದು ಪ್ರಶ್ನಿಸಿದ್ದಾರೆ.
ನಾನು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದೇನೆ. ಆದರೆ ವಿವಿಪಿಎಟಿ ಯಂತ್ರದಿಂದ ಬಂದ ಪ್ರಿಂಟ್‌ಔಟ್‌ನಲ್ಲಿ ಮತ ಬಿಜೆಪಿಗೆ ಹೋಗಿರುವುದು ದಾಖಲಾಗಿದೆ ಎಂದು ಧೋಲಪುರದ ಮತದಾರರೊಬ್ಬರು ಹೇಳಿದ್ದಾರೆ ಎಂದು ಆಜ್‌ತಕ್ ವರದಿ ಮಾಡಿತ್ತು.
ರಾಕೇಶ್ ಜೈನ್ ಎಂಬ ವ್ಯಕ್ತಿಯೊಬ್ಬರು ದೋಷಯುಕ್ತ ಯಂತ್ರದ ಬಗ್ಗೆ ದೂರು ನೀಡಿದ್ದಾರೆ ಎಂದು ಚುನಾವಣಾ ಆಯೋಗದ ಪರವಾಗಿ ಮತದಾನ ಅಧಿಕಾರಿ ಆಜ್‌ತಕ್‌ಗೆ ಸ್ಪಷ್ಟಪಡಿಸಿದ್ದಾರೆ. ಈ ಕಾರಣದಿಂದ ಮತದಾನವನ್ನು ಎರಡು ಗಂಟೆ ಸ್ಥಗಿತಗೊಳಿಸಲಾಗಿತ್ತು. ಕಾಂಗ್ರೆಸ್ ಬೆಂಬಲಿಗರು ದಿಢೀರ್ ಪ್ರತಿಭಟನೆಯನ್ನೂ ನಡೆಸಿದ್ದರು. ಹಲವು ಮತಗಟ್ಟೆಗಳಲ್ಲಿ ಇಂಥ ದೋಷಯುಕ್ತ ಇವಿಎಂಗಳಿದ್ದವು ಎಂದು ವರದಿಯಾಗಿತ್ತು.
ಮಧ್ಯಪ್ರದೇಶದ ಬಿಂದ್ ಜಿಲ್ಲೆಯಲ್ಲಿ ಪರಿಶೀಲನೆ ವೇಳೆ ವಿವಿಪಿಎಟಿ ಜೋಡಿಸಲಾದ ಯಂತ್ರದಲ್ಲಿ ಬಿಜೆಪಿ ಪರ ಮತ ಚಲಾವಣೆಯಾಗಿರುವುದು ಪತ್ತೆಯಾಗಿದೆ. ಇದಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಬಳಸಿದ ಮತಯಂತ್ರಗಳನ್ನು ಇಲ್ಲಿಗೆ ತರಲಾಗಿದೆ ಎಂದು ಕೇಜ್ರಿವಾಲ್ ಆಪಾದಿಸಿದ್ದರು. ಚುನಾವಣಾ ಆಯೋಗ ಇದನ್ನು ಅಲ್ಲಗಳೆದಿತ್ತು.





