ಇಂದು ಪುಣೆಗೆ ಡೆವಿಲ್ಸ್ ಭಯ
ಪುಣೆ, ಎ.10: ಐಪಿಎಲ್‌ನ 9ನೆ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸಲಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್ ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿದೆ.
ಸ್ಟೀವನ್ ಸ್ಮಿತ್, ಎಂಎಸ್ ಧೋನಿ, ಮನೋಜ್ ತಿವಾರಿ ಹಾಗೂ ಬೆನ್ ಸ್ಟೋಕ್ಸ್ ಅವರನ್ನೊಳಗೊಂಡ ಪುಣೆ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ, ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಹಾಗೂ ಧೋನಿಯ ಫಾರ್ಮ್ ತಂಡಕ್ಕೆ ಚಿಂತೆಯಾಗಿ ಕಾಡುತ್ತಿದೆ. ರಹಾನೆ ಮೊದಲೆರಡು ಪಂದ್ಯಗಳಲ್ಲಿ 66 ಹಾಗೂ 19 ರನ್ ಗಳಿಸಿದ್ದಾರೆ. ಸ್ಟೀವ್ ಸ್ಮಿತ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 86 ರನ್‌ಗಳ ಗೆಲುವಿನ ರೂವಾರಿಯಾಗಿದ್ದರು.
ಆಸ್ಟ್ರೇಲಿಯ ನಾಯಕ ಸ್ಮಿತ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೇವಲ 26 ರನ್ ಗಳಿಸಿದ್ದರು. ಮೊದಲ ಪಂದ್ಯದಲ್ಲಿ 21 ರನ್ ಗಳಿಸಿದ್ದ ಸ್ಟೋಕ್ಸ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 50 ರನ್ ಗಳಿಸಿದ್ದರು. ಮನೋಜ್ ತಿವಾರಿ ಅಜೇಯ 40 ರನ್ ಗಳಿಸಿ ಗಮನ ಸೆಳೆದಿದ್ದರು.
ಪುಣೆಯ ಬೌಲಿಂಗ್ ವಿಭಾಗ ದುರ್ಬಲವಾಗಿದೆ. ಅಶೋಕ್ ದಿಂಡ, ಡೇನಿಯಲ್ ಕಿಸ್ಟಿಯಾನ್ ಹಾಗೂ ಸ್ಟೋಕ್ಸ್ ಹೊಸ ಚೆಂಡಿನ ಬೌಲಿಂಗ್‌ನಲ್ಲಿ ಎದುರಾಳಿಗೆ ಸವಾಲಾಗಲು ವಿಫಲರಾಗುತ್ತಿದ್ದಾರೆ. ಪುಣೆ ಮತ್ತೊಂದು ಜಯ ಸಾಧಿಸಬೇಕಾದರೆ ಈ ಮೂವರು ಒಗ್ಗಟ್ಟಿನ ಪ್ರದರ್ಶನ ನೀಡಬೇಕು.
ಪುಣೆಯ ಪರ ದಕ್ಷಿಣ ಆಫ್ರಿಕದ ಲೆಗ್-ಸ್ಪಿನ್ನರ್ ಇಮ್ರಾನ್ ತಾಹಿರ್ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 3 ಹಾಗೂ 2 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ತಾಹಿರ್‌ಗೆ ಮತ್ತೊಂದು ಕಡೆಯಿಂದ ಬೌಲರ್‌ಗಳಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ.
ಮತ್ತೊಂದೆಡೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆರ್‌ಸಿಬಿ ವಿರುದ್ಧ ಆಡಿರುವ ಮೊದಲ ಪಂದ್ಯದಲ್ಲಿ 15 ರನ್‌ಗಳಿಂದ ಸೋತಿದೆ. ಆರ್‌ಸಿಬಿಯನ್ನು 8 ವಿಕೆಟ್ ನಷ್ಟಕ್ಕೆ 157 ರನ್‌ಗೆ ನಿಯಂತ್ರಿಸಿದ್ದ ಹೊರತಾಗಿಯೂ ಡೆಲ್ಲಿಯ ಬ್ಯಾಟ್ಸ್‌ಮನ್‌ಗಳು ಗುರಿ ತಲುಪಲು ವಿಫಲವಾಗಿದ್ದರು. ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಆರ್‌ಸಿಬಿ ವಿರುದ್ಧ ಅನುಭವಿ ಆಟಗಾರ ಝಹೀರ್ ಖಾನ್ ನೇತೃತ್ವದಲ್ಲಿ ಡೆಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿತ್ತು. ಹೊಸ ಚೆಂಡಿನಲ್ಲಿ ಝಹೀರ್(2-31), ಕ್ರಿಸ್ ಮೊರಿಸ್(3-21) ಹಾಗೂ ಪ್ಯಾಟ್ ಕಮಿನ್ಸ್(1-29) ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಎಡಗೈ ಸ್ಪಿನ್ನರ್ ಶಹ್‌ಬಾಝ್ ನದೀಮ್(1-13) ಮಧ್ಯಮ ಕ್ರಮಾಂಕದಲ್ಲಿ ರನ್‌ಗೆ ಕಡಿವಾಣ ಹಾಕಿದ್ದರು.
ಆರ್‌ಸಿಬಿ ವಿರುದ್ಧ ಡೆಲ್ಲಿ ಗೆಲುವಿಗೆ 158 ರನ್ ಗುರಿ ಪಡೆದಿದ್ದರೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯಕ್ಕೀಡಾದರು. ಆದಿತ್ಯ ತಾರೆ, ಸ್ಯಾಮ್ ಬಿಲ್ಲಿಂಗ್ಸ್, ಕರುಣ್ ನಾಯರ್ ಹಾಗೂ ಸಂಜು ಸ್ಯಾಮ್ಸನ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದ ಹೊರತಾಗಿಯೂ ರಿಷಬ್ ಪಂತ್ 36 ಎಸೆತಗಳಲ್ಲಿ 57 ರನ್ ಗಳಿಸಿ ಕೊನೆತನಕ ಹೋರಾಟ ನೀಡಿದ್ದರು. ಪಂತ್ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು.







