ಈ ದೃಷ್ಟಿಮಾಂದ್ಯ ಯುವತಿಯ ಸಾಧನೆ ಏನು ಗೊತ್ತೇ?

ವಡೋದರ, ಎ.11: ಈ ಯುವತಿಯ ದೃಷ್ಟಿ ಕ್ರಮೇಣ ಮಂದವಾಗುತ್ತಲೇ ಇತ್ತು. ಆದರೆ ಅದು ನಿರ್ದಿಷ್ಟ ಗುರಿಯತ್ತ ನೆಟ್ಟಿತ್ತು. ಅದು, ವಿಶ್ವದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎನಿಸಿದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಅಧ್ಯಯನ ಮಾಡುವ ಕನಸು!
ಪ್ರಾಚಿ ಸಾಳುಂಕೆ ಎಂಬ 21 ವರ್ಷದ ಯುವತಿ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದ ಬಿಬಿಎ ಪದವೀಧರೆ. ರೆಟಿನಲ್ ಡಿಗ್ರೇಡೇಷನ್ ಎಂಬ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಈಕೆ ಇದೀಗ ಐಐಎಂ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಹ್ಮದಾಬಾದ್ ಐಐಎಂನಲ್ಲಿ ಅಧ್ಯಯನ ಮಾಡಲು ಆಯ್ಕೆಯಾಗಿದ್ದಾಳೆ. ಸೋಮವಾರ ಬಿಬಿಎ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಈ ಸಿಹಿ ಸುದ್ದಿ ಆಕೆಗೆ ತಲುಪಿದೆ.
ಮೂರನೇ ತರಗತಿ ಇದ್ದಾಗಿನಿಂದ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದ ಈ ಸಾಹಸಿ ಯುವತಿಗೆ ಈಗ ಶೇಕಡ 80ರಷ್ಟು ದೃಷ್ಟಿ ನಾಶವಾಗಿದೆ. ಈ ಅಪರೂಪದ ಕಾಯಿಲೆಗೆ ಚಿಕಿತ್ಸೆ ಇಲ್ಲ. ಆದರೆ ಅದು ಪ್ರಾಚಿ ಕನಸಿಗೆ ಅಡ್ಡಿಯಾಗಲಿಲ್ಲ. "ಬಹುರಾಷ್ಟ್ರೀಯ ಕಂಪನಿಗೆ ಉದ್ಯೋಗಕ್ಕೆ ಸೇರುವುದು ನನ್ನ ತಕ್ಷಣದ ಗುರಿಯಾಗಿತ್ತು. ಸ್ವಲ್ಪ ಅನುಭವ ದೊರಕಿದ ಮೇಲೆ ಸ್ವಂತ ಉದ್ಯಮ ಆರಂಭಿಸುವ ಯೋಚನೆ ಇದೆ. ದೀರ್ಘಾವಧಿ ಗುರಿ ಎಂದರೆ ಅಂಧರಿಗಾಗಿ ಸ್ವಯಂಸೇವಾ ಸಂಸ್ಥೆ ಹುಟ್ಟುಹಾಕುವುದು" ಎಂದು ಸಿಎಟಿ 2016 ಪರೀಕ್ಷೆಯಲ್ಲಿ 98.55 ಅಂಕಗಳನ್ನು ಗಳಿಸಿರುವ ಪ್ರಾಚಿ ಸ್ಪಷ್ಟಪಡಿಸಿದರು.
ಪ್ರಾಚಿ ತಂದೆ ಸುರೇಶ್ ಸುಖವಾನಿ ಸಿದ್ಧ ಉಡುಪುಗಳ ವ್ಯಾಪಾರಿ. 15 ವರ್ಷಗಳಿಂದ ಮಗಳನ್ನು ಚೆನ್ನೈ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ವೈದ್ಯರು ಆಕೆಗೆ ಓದುವ ವಿಶೇಷ ಕನ್ನಡಕ ಧರಿಸುವಂತೆ ಸೂಚಿಸಿದ್ದಾರೆ ಎಂದು ಅವರು ವಿವರಿಸಿದರು.







