ಪತ್ನಿಗೇ ಬೆಂಕಿ ಹಚ್ಚಿದ ಭೂಪ ಕೊಲ್ಲುವ ಉದ್ದೇಶವಿರಲಿಲ್ಲ ಎಂದ!
ನ್ಯಾಯಾಲಯ ಆತನ ಜೀವಾವಧಿ ಶಿಕ್ಷೆಯ ಅವಧಿಯನ್ನು ಕಡಿಮೆಗೊಳಿಸಿತು

ಮುಂಬೈ, ಎ.11: ತನ್ನ ಪತ್ನಿಗೇ ಬೆಂಕಿ ಹಚ್ಚಿದ ವ್ಯಕ್ತಿಯೊಬ್ಬ ತಾನು ಆಕೆಗೆ ಸುಟ್ಟ ಗಾಯಗಳನ್ನು ಮಾಡಬೇಕೆಂದಿದ್ದೆಯೇ ಹೊರತು ಕೊಲ್ಲುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಆರೋಪಿಯ ಜೀವಾವಧಿ ಶಿಕ್ಷೆಯ ಅವಧಿಯನ್ನು ಕಡಿಮೆಗೊಳಿಸಿದ ಘಟನೆ ನಡೆದಿದೆ.
ಜಸ್ಟಿಸ್ ವಿ.ಕೆ.ತಾಹಿಲ್ರಮಣಿ ತಮ್ಮ ತೀರ್ಪಿನಲ್ಲಿ ‘‘ತನ್ನ ಪತ್ನಿಯನ್ನು ಕೊಂದಿದ್ದಕ್ಕೆ ದೋಷಿಯೆಂದು ಘೋಷಿತನಾಗಿರುವ ವ್ಯಕ್ತಿ ತಾನು ಆಕೆಗೆ ಸುಟ್ಟ ಗಾಯಗಳನ್ನು ಮಾಡಬೇಕೆಂದಿದ್ದೆ, ಕೊಲ್ಲುವ ಉದ್ದೇಶವಿರಲಿಲ್ಲ, ದುರದೃಷ್ಟವಶಾತ್ ಪರಿಸ್ಥಿತಿ ಕೈಮೀರಿ ಹೋಯಿತು’’ ಎಂದು ಹೇಳಿದ್ದಾನೆಂದು ತಿಳಿಸಿದ್ದಾರೆ.
ತನ್ನ ಪತ್ನಿಗೆ ಬೆಂಕಿ ಹಚ್ಚಿದ ಮೇಲೆ ಆಕೆಯನ್ನು ರಕ್ಷಿಸಲು ಯತ್ನಿಸಿದ್ದ ಬಗ್ಗೆ, ಆಕೆಯ ಮೇಲೆ ನೀರು ಚಿಮುಕಿಸಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಬಗ್ಗೆಯೂ ಉಲ್ಲೇಖಿಸಿ ಆತನ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ 10 ವರ್ಷಕ್ಕೆ ಇಳಿಸಿದೆ. ಸುಪ್ರೀಂ ಕೋರ್ಟ್ ಇಂತಹುದೇ ಒಂದು ಪ್ರಕರಣದಲ್ಲಿ ಈ ಹಿಂದೆ ನೀಡಿದ ತೀರ್ಪನ್ನು ಜಸ್ಟಿಸ್ ತಾಹಿಲ್ರಮಣಿ ಉಲ್ಲೇಖಿಸಿದ್ದರು.
‘‘ಆರೋಪಿಗೆ ತನ್ನ ತಪ್ಪಿನ ಅರಿವಾಗಿ, ಪಶ್ಚಾತ್ತಾಪದಿಂದ ಆಕೆಗೆ ನೀರು ಚಿಮುಕಿಸಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಲಭ್ಯ ಸಾಕ್ಷ್ಯಗಳಿಂದ ಆತ ಆಕೆಯನ್ನು ಕೊಲ್ಲುವ ಉದ್ದೇಶ ಹೊಂದಿರಲಿಲ್ಲ ಎಂದು ತಿಳಿದು ಬರುತ್ತದೆ’’ ಎಂದು ಜಸ್ಟಿಸ್ ತಾಹಿಲ್ರಮಣಿ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಆದರೆ ನ್ಯಾಯಾಲಯದ ಈ ಆದೇಶ ಹಲವರಲ್ಲಿ ಆಕ್ರೋಶ ಮೂಡಿಸಿದೆ.







