ಬಜರಂಗ ದಳದಂತೆ ಪಿಎಫ್‌ಐ ಕೂಡ ಕೋಮು ಸಂಘಟನೆ: ಇಬ್ರಾಹೀಂ ಕೋಡಿಜಾಲ್

ಮಂಗಳೂರು, ಎ.11: ಬಜರಂಗ ದಳದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೂಡ ಕೋಮುವಾದಿ ಸಂಘಟನೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಿಎಫ್‌ಐ ಸಮಾಜದಲ್ಲಿ ಶಾಂತಿ ನೆಲೆಸುವ ಬದಲು ಅಶಾಂತಿ ಸೃಷ್ಟಿಸುತ್ತಿದೆ. ಅಹ್ಮದ್ ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದ್ದರೆ ಪಿಎಫ್‌ಐ ಸಂಘಟನೆಯು ಪೊಲೀಸ್ ಆಯುಕ್ತರನ್ನು ಕಂಡು ಮಾತನಾಡಬೇಕಿತ್ತು. ಅದು ಬಿಟ್ಟು ಏಕಾಎಕಿ ಪಿಎಫ್‌ಐ ಪೊಲೀಸ್ ಆಯುಕ್ತರ ಕಚೇರಿ ಮೇಲೆ ಮುತ್ತಿಗೆ ಹಾಕಲು ಮುಂದಾಗಿರುವುದು ಸರಿಯಲ್ಲ ಎಂದರು.
ಮುತ್ತಿಗೆ ಹಾಕಲು ಯತ್ನಿಸಿದ ಪಿಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಜಾರ್ಜ್ ಮಾಡಿದ್ದು ಸರಿಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಇಬ್ರಾಹೀಂ ಕೋಡಿಜಾಲ್, ಅಹ್ಮದ್ ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದ್ದರೆ ಖಂಡನೀಯ. ಅದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದರು.
ರಾಜ್ಯದಲ್ಲಿ ನಿಮ್ಮದೇ ಆಡಳಿತ ಪಕ್ಷವಿದೆ. ಹೀಗಿರುವಾಗ ನೀವು ಖಂಡಿಸುವುದು ಯಾರನ್ನು? ಪಕ್ಷವನ್ನೋ, ಸರಕಾರವನ್ನೋ ಎಂದು ಪತ್ರಕರ್ತರು ಪ್ರಶ್ನಿಸಿದರು.
ಇಲ್ಲಿ ಪಕ್ಷದ ಪ್ರಶ್ನೆಯಲ್ಲ. ಯಾವುದೇ ಅಧಿಕಾರಿ ತನ್ನ ಸಂವಿಧಾನದತ್ತ ಅಧಿಕಾರವನ್ನು ದುರುಪಯೋಗ ಪಡಿಸುವುದು ಸರಿಯಲ್ಲ. ಪೊಲೀಸರು ಅಹ್ಮದ್ ಖುರೇಷಿ ಮೇಲೆ ದೌರ್ಜನ್ಯ ಎಸಗಿದ್ದರೆ ಅದು ಖಂಡನೀಯ. ಈಗಾಗಲೆ ಈ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಕಂಡು ಮಾತನಾಡಿದ್ದೇವೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಇಬ್ರಾಹೀಂ ಕೋಡಿಜಾಲ್ ಹೇಳಿದರು.
*ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಹೇಳಿಕೆ ನೀಡುವುದು ಬೇಡ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೋಡಿಜಾಲ್, ಕಾಂಗ್ರೆಸ್ ಜಾತ್ಯತೀತ ಪಕ್ಷ. ಅದು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಕಾಂಗ್ರೆಸ್ ಪಕ್ಷ ಕ್ಷೀಣಿಸಲು ಇಂತಹ ನಾಯಕರೇ ಕಾರಣ. ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಹೇಳಿಕೆ ನೀಡುವ ಬದಲು ಅವರು ಪಕ್ಷ ಬಿಟ್ಟು ಹೋಗುವುದು ಒಳ್ಳೆಯದು ಎಂದರು.
ಈ ಮಾತು ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿಗೂ ಅನ್ವಯವಾಗಲಿದೆಯೇ? ಎಂಬ ಪ್ರಶ್ನೆಗೆ ಕೋಡಿಜಾಲ್ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಕವಿತಾ ಸನಿಲ್, ಮಾಜಿ ಮೇಯರ್ ಹರಿನಾಥ್, ಪಕ್ಷದ ಮುಖಂಡರಾದ ಹರ್ಷರಾಜ ಮುದ್ಯ, ಪದ್ಮನಾಭ ನರಿಂಗಾನ, ಬಾಲಕೃಷ್ಣ ಶೆಟ್ಟಿ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.







