ಮಂಡ್ಯದಲ್ಲಿ ಬಸ್ ಅಪಘಾತ: ಕುಂದಾಪುರದವರ ಸಹಿತ 21 ಮಂದಿಗೆ ಗಾಯ

ನಾಗಮಂಗಲ, ಎ.11: ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ನಿಂತಿದ್ದ ಲಾರಿಗೆ ಢಿಕ್ಕಿಯಾದ ಪರಿಣಾಮ ಸುಮಾರು 21 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಂಡ್ಯ ಜಿಲ್ಲೆಯ ಬೆಳ್ಳೂರು ಹೋಬಳಿ ಕಂಚಿನಕೋಟೆ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ಅಪಘಾತದಲ್ಲಿ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಚಾಲಕ ಸೇರಿದಂತೆ ಗಾಯಗೊಂಡವರೆಲ್ಲರನ್ನೂ ಹತ್ತಿರದ ಆದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಭಾರತಿ ಹೆಸರಿನ ಖಾಸಗಿ ಬಸ್ ಕಂಚಿನಕೋಟೆ ಬಳಿ ಟಯರ್ ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಢಿಕ್ಕಿಯೊಡೆದು ಈ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಉಡುಪಿ-ಕುಂದಾಪುರದ ಯಶೋಧ ಬಸವರಾಜು ದಂಪತಿ, ಉದಯ, ರೇಷ್ಮಾ, ಹೊನ್ನಾವರದ ಶರತ್, ಬೆಂಗಳೂರು ಜಿಲ್ಲೆಯ ಬನ್ನೇರುಘಟ್ಟದ ಮೋಹನ್ ಎಂಬವರು ಸೇರಿದಂತೆ ಒಟ್ಟು 21 ಮಂದಿ ಗಾಯಗೊಂಡಿದ್ದಾರೆ. ಉಳಿದ ಗಾಯಾಳುಗಳ ವಿವರ ಲಭ್ಯವಾಗಿಲ್ಲ.
ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು. ರಸ್ತೆ ಮಧ್ಯೆಯಲ್ಲಿದ್ದ ವಾಹನವನ್ನು ಟ್ರೇಲರ್ ಮೂಲಕ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.







