ಬೆಂಗಳೂರಿನ ಕಿರೀಟಕ್ಕೆ ಇನ್ನೊಂದು ವಿಶಿಷ್ಟ ಗರಿ

ಬೆಂಗಳೂರು, ಎ.11: ದೇಶದ ಐಟಿ ರಾಜಧಾನಿಯೆಂದೇ ಖ್ಯಾತವಾಗಿರುವ ಬೆಂಗಳೂರಿನ ಕಿರೀಟಕ್ಕೆ ಮತ್ತೊಂದು ವಿಶಿಷ್ಟ ಗರಿ ಮೂಡಿದೆ. ರ್ಯಾಂಡ್(rand)ಸ್ಟಾಡ್ ಸ್ಯಾಲರಿ ಟ್ರೆಂಡ್ಸ್ ಸ್ಟಡಿ 2017ರ ಪ್ರಕಾರ ದೇಶದಲ್ಲಿಯೇ ವೃತ್ತಿಪರರಿಗೆ ಅತ್ಯಂತ ಹೆಚ್ಚು ವೇತನ ನೀಡುವ ನಗರವಾಗಿ ಅದು ಗುರುತಿಸಿಕೊಂಡಿದೆ. ನಗರದ ವೃತ್ತಿಪರರು ಸರಾಸರಿ ವಾರ್ಷಿಕ ವೇತನ ರೂ 14.6 ಲಕ್ಷ ಪಡೆಯುತ್ತಾರೆಂದು ಈ ಸಮೀಕ್ಷೆ ತಿಳಿಸಿದೆ.
ಬೆಂಗಳೂರಿನ ನಂತರದ ಸ್ಥಾನ ಮುಂಬೈ (ರೂ.14.2 ಲಕ್ಷ) ಹಾಗೂ ಹೈದರಾಬಾದ್ (ರೂ.13.6 ಲಕ್ಷ) ಪಡೆದಿವೆ. ಈ ಸಮೀಕ್ಷೆಯ ಪ್ರಕಾರ ಜಾವಾ ಪ್ರೊಗ್ರಾಮರ್ಸ್ ದೇಶದಲ್ಲಿ ಅತ್ಯಧಿಕ ವೇತನ ಪಡೆಯುವ ವೃತ್ತಿಪರರಾಗಿದ್ದಾರೆ. ಅವರು ವಾರ್ಷಿಕ ಸರಾಸರಿ ರೂ.18 ಲಕ್ಷ ವೇತನ ಪಡೆಯುತ್ತಾರೆಂದು ಸಮೀಕ್ಷೆ ಕಂಡುಕೊಂಡಿದೆ.
ದೇಶದಾದ್ಯಂತ ಸುಮಾರು 15 ವಿವಿಧ ಕ್ಷೇತ್ರಗಳ 20 ಕೈಗಾರಿಕೆಗಳ ಒಂದು ಲಕ್ಷ ಉದ್ಯೋಗಗಳನ್ನು ವಿಶ್ಲೇಷಿಸಿ ಈ ವರದಿಯನ್ನು ತಯಾರಿಸಲಾಗಿದೆ. ವೇತನಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಪ್ರಮುಖ ನಗರಗಳ ಪೈಕಿ ಕೊನೆಯ ಸ್ಥಾನದಲ್ಲಿದ್ದು, ಇಲ್ಲಿನ ವೃತ್ತಿಪರರು ಸರಾಸರಿ ವಾರ್ಷಿಕ ರೂ. 11.4 ಲಕ್ಷ ವೇತನ ಪಡೆಯುತ್ತಾರೆ.
ಆರು ವರ್ಷಗಳ ತನಕ ಅನುಭವವಿರುವ ಯುವ ಉದ್ಯೋಗಿಗಳಿಗೆ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ಐಟಿ ಕ್ಷೇತ್ರದಲ್ಲಿ ಅತ್ಯಧಿಕ ವೇತನ ದೊರೆಯುತ್ತಿದೆ. ಈ ವರ್ಗದ ಸರಾಸರಿ ವೇತನ ವಾರ್ಷಿಕ ರೂ. 5.5 ಲಕ್ಷ ಆಗಿದ್ದರೆ ದಿಲ್ಲಿ ಹಾಗೂ ಚೆನ್ನೈನಲ್ಲಿ ವೇತನ ಕ್ರಮವಾಗಿ ರೂ. 5.4 ಲಕ್ಷ ಹಾಗೂ ರೂ. 5.5 ಲಕ್ಷ ಆಗಿದೆ.
ಆರರಿಂದ-15 ವರ್ಷ ಅನುಭವವಿರುವ ಉದ್ಯೋಗಿಗಳಿಗೆ ಮುಂಬೈ ವಾರ್ಷಿಕ ರೂ. 10.5 ಲಕ್ಷ ವೇತನದೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ ನಂತರದ ಸ್ಥಾನಗಳು ಬೆಂಗಳೂರು ಹಾಗೂ ಚೆನ್ನೈಗೆ ಹೋಗಿವೆ.
ಹದಿನೈದು ವರ್ಷ ಮೇಲ್ಪಟ್ಟು ಅನುಭವವಿರುವವರಿಗೆ ಬೆಂಗಳೂರು ನಗರದಲ್ಲಿ ಗರಿಷ್ಠ ಅಂದರೆ ರೂ. 28 ಲಕ್ಷ ವಾರ್ಷಿಕ ವೇತನ ದೊರೆಯುತ್ತಿದೆಯೆಂದೂ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.







