ಎ.15ರಂದು ಬೈಕಂಪಾಡಿ ಅಡ್ಕ ನವೀಕೃತ ಗೌಸಿಯಾ ಮಸೀದಿ ಉದ್ಘಾಟನೆ
*ಮುಹಮ್ಮದ್ ವಲಿಯುಲ್ಲಾ ಉರೂಸ್‌ಗೆ ಚಾಲನೆ

ಮಂಗಳೂರು, ಎ.11: ಬೈಕಂಪಾಡಿಯ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಮ್ ಜಮಾಅತ್(ರಿ)ನ ಅಧೀನದ ಹಝ್ರತ್ ಶೇಕ್ ಮುಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್ ಹೆಸರಿನಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ಬೈಕಂಪಾಡಿ ಅಡ್ಕ ಉರೂಸ್ ಕಾರ್ಯಕ್ರಮವು ಎ.15ರಿಂದ 21ರವರೆಗೆ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಬಿ.ಎ. ಅಬ್ದುನ್ನಾಸಿರ್ ಲಕ್ಕಿಸ್ಟಾರ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 1.50 ಕೋ.ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ಅಡ್ಕಾ ಗೌಸಿಯಾ ಮಸೀದಿ ಹಾಗೂ ದರ್ಗಾ ಕಟ್ಟಡವನ್ನು ಎ.15ರಂದು ಸಂಜೆ 6:30ಕ್ಕೆ ಖ್ಯಾತ ವಿದ್ವಾಂಸ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಶಿಕ್ಷಣ ಸಚಿವ ತನ್ವೀರ್ ಸೇಠ್, ಶಾಸಕ ಬಿ.ಎ. ಮೊಯ್ದಿನ್ ಬಾವ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಎ.16ರಂದು ರಾತ್ರಿ 8 ಗಂಟೆಗೆ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಕಬೀರ್ ಬಾಖವಿ ಕೊಲ್ಲಂ ಆಗಮಿಸಲಿದ್ದಾರೆ. ಎ.17ರಂದು ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ರಹ್ಮಾನ್ ಖಾನ್, ರಾಜ್ಯ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಲಿದ್ದಾರೆ.
ಎ.18ರಂದು ಕೇರಳದ ವಿದ್ವಾಂಸ ಮುಳ್ಳೂರುಕೆರೆ ಮುಹಮ್ಮದ್ ಅಲಿ ಸಖಾಫಿ, ಎ.19ರಂದು ಶಿಹಾಬುದ್ದೀನ್ ತಂಙಳ್ ಕಿಲ್ಲೂರು ಭಾಗವಹಿಸಲಿದ್ದಾರೆ. ಅಂದು ಸೈಯದ್ ಅಮಾನಿ ಪಟ್ಟುವಂ ಸಂಗಡಿಗರಿಂದ ಬುರ್ದಾ ಮಜ್ಲಿಸ್ ಮತ್ತು ನಬೀಲ್ ಬೆಂಗಳೂರು ಅವರಿಂದ ನಅತೇ ಶರೀಫ್ ಆಲಾಪನೆ ನಡೆಯಲಿದೆ. ಎ.20ರಂದು ಶರೀಫ್ ಅರ್ಶದಿ ಸವಣೂರು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಎ.21ರಂದು ಸಂಜೆ 7 ಗಂಟೆಗೆ ಉರೂಸ್ ಸಮಾರೋಪ ಸಮಾರಂಭ, ಅಡ್ಕಾ ಸಮುದಾಯ ಭವನದ ವಿಸ್ತರಿತ ಉಪಾಹಾರ ಗೃಹ ಕಟ್ಟಡ ಉದ್ಘಾಟನೆ ಹಾಗೂ ಪ್ರವಾಸೋದ್ಯಮ ಇಲಾಖೆಯ 25 ಲಕ್ಷ ರೂ. ಅನುದಾನದಿಂದ ನಿರ್ಮಿಸಲ್ಪಟ್ಟ ಯಾತ್ರಿ ನಿವಾಸ್ ಕಟ್ಟಡದ ಶಂಕುಸ್ಥಾಪನೆ ನಡೆಯಲಿದೆ. ಈ ಸಂದರ್ಭ ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್, ರೋಶನ್ ಬೇಗ್, ಪ್ರಿಯಾಂಕ್ ಖರ್ಗೆ, ಸಂಸದ ನಳಿನ್‌ಕುಮಾರ್ ಕಟೀಲು, ಮಾಜಿ ಸಚಿವ ಸುಬ್ಬಯ್ಯ ಶೆಟ್ಟಿ, ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಶಾಸಕ ಮೊಯ್ದಿನ್ ಬಾವಾ, ಐವನ್ ಡಿಸೋಜ ಮತ್ತಿತರರು ಭಾಗವಹಿಸಲಿದ್ದಾರೆ.
ಹಿರಿಯ ವಿದ್ವಾಂಸ ಸೈಯದ್ ಬಾಫಕಿ ತಂಙಳ್ ಆಶೀರ್ವಚನ ನೀಡಲಿದ್ದಾರೆ. ಡಾ.ಫಾರೂಕ್ ನಈಮಿ ಕೊಲ್ಲಂ ಹಾಗೂ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಪ್ರಭಾಷಣ ಮಾಡಲಿದ್ದಾರೆ. ಅಂದು ರಾತ್ರಿ 10 ಗಂಟೆಗೆ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಬಿ.ಎ. ಅಬ್ದುನ್ನಾಸಿರ್ ಲಕ್ಕಿಸ್ಟಾರ್ ತಿಳಿಸಿದ್ದಾರೆ.
ಮನಪಾ ವ್ಯಾಪ್ತಿಯಲ್ಲಿ ನಡೆಯುವ ಅತಿದೊಡ್ಡ ಉರೂಸ್ ಕಾರ್ಯಕ್ರಮ ಇದಾಗಿದೆ. ಈಗಾಗಲೇ ಶಾಸಕ ಬಿ.ಎ. ಮೊಯ್ದಿನ್ ಬಾವಾ ಅವರ ಪ್ರಯತ್ನದಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 50 ಲಕ್ಷ ರೂ. ಮಂಜೂರಾಗಿದೆ. ಇದನ್ನು ದರ್ಗಾ ಪರಿಸರದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವೆಚ್ಚ ಮಾಡಲಾಗುತ್ತಿದೆ ಎಂದು ತಿಳಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ, ಬೈಕಂಪಾಡಿ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಸೈದುದ್ದೀನ್, ನ್ಯಾಯವಾದಿ ಮುಖ್ತಾರ್ ಅಹ್ಮದ್, ಜೊತೆ ಕಾರ್ಯದರ್ಶಿ ಶಮೀರ್ ಹಸನ್ ಉಪಸ್ಥಿತರಿದ್ದರು.







