ಇನ್ನು ಪ್ರತೀ ರವಿವಾರ ಪೆಟ್ರೋಲ್ ಪಂಪ್ ಬಂದ್ !
ಪ್ರತಿದಿನ ಬೆಳಗ್ಗಿನಿಂದ ಸಂಜೆವರೆಗೆ ಮಾತ್ರ ಸೇವೆ ?
ಮುಂಬೈ, ಎ.11: ಹೆಚ್ಚಿನ ಮಾರ್ಜಿನ್ ಒದಗಿಸಬೇಕೆಂಬ ತಮ್ಮ ಬೇಡಿಕೆಯನ್ನು ಸರಕಾರ ಒಪ್ಪದೇ ಇದ್ದಲ್ಲಿ ತಾವು ಮೇ 10ರಂದು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದಿಲ್ಲ ಹಾಗೂ ಪ್ರತೀ ರವಿವಾರದಂದು ತಮ್ಮ ಪೆಟ್ರೋಲ್ ಪಂಪುಗಳನ್ನು ಮುಚ್ಚುವುದಾಗಿ ಪೆಟ್ರೋಲ್ ಪಂಪ್ ಮಾಲಕರು ಬೆದರಿಕೆ ಹಾಕಿದ್ದಾರೆ.
ಮೇ 14ರಿಂದ ಪೆಟ್ರೋಲ್ ಬಂಕ್ ಮಾಲಕರು ತಮ್ಮ ಬಂಕ್ ಗಳನ್ನು ಪ್ರತೀ ರವಿವಾರ ಮುಚ್ಚಲಿದ್ದರೆ, ಮೇ 15ರಿಂದ ಬೆಳಗ್ಗೆ 9ರಿಂದ ಸಂಜೆ 6ರ ತನಕ ಮಾತ್ರ ಕಾರ್ಯಾಚರಿಸುವುದಾಗಿ ಹೇಳಿದ್ದಾರೆ.
ಮೇ 10ರಂದು ತಾವು ಪೆಟ್ರೋಲ್, ಡೀಸೆಲ್ ಖರೀದಿ ಮಾಡದಿರುವುದರಿಂದ ಹೆಚ್ಚಿನ ಪರಿಣಾಮ ಬೀರದೇ ಇದ್ದರೂ ತಾವು ಸಮರದ ಹಾದಿ ಹಿಡಿದಿದ್ದೇವೆಂದು ತೈಲ ಮಾರುಕಟ್ಟೆ ಕಂಪೆನಿಗಳಿಗೆ ಹೇಳುವ ಪ್ರಯತ್ನ ಇದಾಗಿದೆ ಎಂದು ಪೆಟ್ರೋಲ್ ವಿತರಕರ ಸಂಘ ಹೇಳಿಕೊಂಡಿದೆ. ತಮಗೆ ಹೆಚ್ಚಿನ ಮಾರ್ಜಿನ್ ಒದಗಿಸುವ ತನಕ ಮೇಲಿನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲವೆಂದು 53,000 ಸದಸ್ಯರಿರುವ ಕನ್ಸಾರ್ಟಿಯಮ್ ಆಫ್ ಇಂಡಿಯನ್ ಪೆಟ್ರೋಲಿಯಂ ಡೀಲರ್ಸ್ ಸಭೆಯೊಂದು ನಿರ್ಧರಿಸಿದೆ.
ಕಮಿಷನ್ ದರವನ್ನು ಪರಿಷ್ಕರಿಸಲು ತೈಲ ಮಾರುಕಟ್ಟೆ ಕಂಪೆನಿಗಳು ಈ ಹಿಂದೆ ಒಪ್ಪಿದ್ದರಿಂದ ಜನವರಿಯಲ್ಲಿ ತಾವು ನಡೆಸಬೇಕಿದ್ದ ಮುಷ್ಕರವನ್ನು ಸಂಘ ಹಿಂಪಡೆದಿತ್ತು.