ಇಲ್ಲಿ ಗೋಡಂಬಿ ಕೇಜಿಗೆ 10 - 20 ರೂಪಾಯಿ !

ಜಮತಾಡ,ಎ.11 : ಗೋಡಂಬಿ ತಿನ್ನುವುದೆಂದರೆ ಹಲವರಿಗೆ ಇಷ್ಟ. ಅದು ಆರೋಗ್ಯವರ್ಧಕವೂ ಹೌದು. ಆದರೆ ಅದರ ಬೆಲೆ ಮಾತ್ರ ಕೈಗೆಟಕುವಂತಹುದ್ದಲ್ಲ. ರಾಜಧಾನಿ ದೆಹಲಿಯಲ್ಲಿ ಗೋಡಂಬಿ ಕೆಜಿಗೆ ರೂ 800ರಂತೆ ಮಾರಾಟವಾಗುತ್ತಿದ್ದರೆ ಅಲ್ಲಿಂದ 1200 ಕಿಮೀ ದೂರದ ಜಾರ್ಖಂಡ್ ರಾಜ್ಯದ ಒಂದು ಪಟ್ಟಣದಲ್ಲಿ ಗೋಡಂಬಿ ಕೆಜಿಗೆ ರೂ 10ರಿಂದ ರೂ 20ಕ್ಕೆ ಲಭ್ಯವಿದೆಯೆಂದರೆ ನಂಬಲು ಸಾಧ್ಯವೇ ? ಆದರೆ ಇದು ನಿಜ.
ಜಮತಾಡ ಜಿಲ್ಲೆಯ ನಾಲ ಎಂಬ ಗ್ರಾಮದ 49 ಎಕರೆ ಪ್ರದೇಶದಲ್ಲಿ ಗೇರು ಬೆಳೆ ಬೆಳೆಯಲಾಗುತ್ತಿದ್ದು ಗೇರು ಇಳೆಯೂ ಸಾಕಷ್ಟು ಆಗುತ್ತಿರುವುದರಿಂದ ಇಲ್ಲಿ ಗೇರುಬೀಜ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ.
ಇಷ್ಟೊಂದು ವಿಸ್ತಾರವಾದ ಪ್ರದೇಶದಲ್ಲಿ ಗೇರು ಬೆಳೆ ಬೆಳೆದಿರುವ ಹಿಂದೆ ಒಂದು ಕಥೆಯಿದೆ. ಇಲ್ಲಿನ ಹಿಂದಿನ ಜಿಲ್ಲಾಧಿಕಾರಿ ಕೃಪಾನಂದ್ ಝಾ ಎಂಬವರಿಗೆ ಗೋಡಂಬಿ ತಿನ್ನುವುದೆಂದರೆ ಬಹಳ ಇಷ್ಟವಾಗಿತ್ತು. ಇದೇ ಕಾರಣದಿಂದ ಅವರು ಗೇರು ಬೆಳೆಯಲ್ಲಿ ಆಸಕ್ತಿ ವಹಿಸಿದ್ದರು. ಒಡಿಶಾದ ಗೇರು ಬೆಳೆಗಾರರನ್ನು ಕಂಡು ಮಾತನಾಡಿಸಿದ ಅವರು ಕೃಷಿ ವಿಜ್ಞಾನಿಗಳಿಂದಲೂ ಮಾಹಿತಿ ಪಡೆದು ಗೇರು ಬೆಳೆಗೆ ಉತ್ತೇಜನ ನೀಡಿದರು. ಕೆಲವೇ ವರ್ಷಗಳಲ್ಲಿ ಇಲ್ಲಿ ಗೇರು ಬೆಳೆಗಳು ಅಧಿಕ ಇಳುವರಿ ನೀಡಲಾರಂಭಿಸಿದ್ದವು.
ಝಾ ಅವರು ಇಲ್ಲಿಂದ ವರ್ಗವಾದ ನಂತರ ಗೇರು ತೋಟಗಳ ಉಸ್ತುವಾರಿಯನ್ನು ಮೂರು ವರ್ಷಗಳ ಕಾಲ ನಿಮಾಯಿ ಘೋಷ್ ಎಂಡ್ ಕಂಪೆನಿಗೆ ನೀಡಲಾಗಿತ್ತು. ಇಲ್ಲಿ ಪ್ರತಿ ವರ್ಷ ಸಾವಿರಾರು ಕ್ವಿಂಟಾಲ್ ಗೇರು ಇಳುವರಿ ದೊರೆಯುತ್ತಿತ್ತು.
ಕಳೆದ ವರ್ಷ ಇಲ್ಲಿ 100 ಹೆಕ್ಟೇರ್ ಪ್ರದೇಶದಲ್ಲಿ ಗೇರು ಮರಗಳನ್ನು ಬೆಳೆಸಲು ನಿರ್ಧರಿಸಲಾಗಿತ್ತು. ರಾಷ್ಟ್ರೀಯ ತೋಟಗಾರಿಕಾ ಮಿಶನ್ ಅನ್ವಯ ಗೇರು ಗಿಡಗಳನ್ನು ನೆಡುವ ಜವಾಬ್ದಾರಿ ಜಿಲ್ಲಾ ಕೃಷಿ ಇಲಾಖೆಗೆ ನೀಡಲಾಗಿದೆಯಾದರೂ ಈ ಕಾರ್ಯ ಇನ್ನೂ ಆರಂಭಗೊಂಡಿಲ್ಲ.