ಐವರು ಸರಗಳ್ಳರ ಬಂಧನ, 14 ಲಕ್ಷ ರೂ. ಮೌಲ್ಯದ ಆಭರಣ ವಶ

ಬೆಂಗಳೂರು, ಎ.11: ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ವಿಭಾಗದ ಪೊಲೀಸರು 15 ಪ್ರಕರಣಗಳನ್ನು ಪತ್ತೆಹಚ್ಚಿ, 5 ಜನರನ್ನು ಬಂಧಿಸಿ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಸಿಂಗಸಂದ್ರ ನಿವಾಸಿ ರಮೇಶ್ ಯಾನೆ ಜೀವನ್(24), ತಮಿಳುನಾಡಿನ ಡಂಕಣಕೋಟೆಯ ನಾಗರಾಜ್(22), ರಾಜೇಶ್ (25), ಹೆಬ್ಬಗೋಡಿಯ ಶಾಮಸುಂದರ್ (21), ಹುಸ್ಕೂರ್ ಗೇಟ್‌ನ ರಂಗಸ್ವಾಮಿ(22) ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನ್ಯಾಯಾಂಗ ಬಂಧನದಲ್ಲಿದ್ದ ಡಂಕಣಕೋಟೆಯ ಮಾದೇಶ್ ಆಲಿಯಾಸ್ ಮಾದೇವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಉಳಿದ ಆರೋಪಿಗಳ ಬಗ್ಗೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಜಯನಗರ ಉಪ ವಿಭಾಗದ ಅಪರಾಧ ಪತ್ತೆದಳದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನದಿಂದ ಜಯನಗರ, ಬನಶಂಕರಿ, ಸಿದ್ದಾಪುರ, ಜೆ.ಪಿ. ನಗರ, ರಾಜಗೋಪಾಲನಗರ, ಹೆಬ್ಬಗೋಡಿ, ಆನೇಕಲ್ ಇನ್ನಿತರ ಕಡೆಗಳಲ್ಲಿ ಸರ ಅಪಹರಣ, ಮನೆಕಳವು, ಸುಲಿಗೆ ಸೇರಿ 15 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ 440 ಗ್ರಾಂ ಚಿನ್ನಾಭರಣ, 2 ಬೈಕ್ ಸೇರಿ 14 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.







