ಜಾಧವ್‌ಗೆ ಗಲ್ಲು ಶಿಕ್ಷೆ ತೀರ್ಪು: ಪಾಕ್ ವಿರುದ್ಧ ಭಾರತದ ತೀವ್ರ ಆಕ್ರೋಶ

ಹೊಸದಿಲ್ಲಿ,ಎ.11: ಬಲೂಚಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಪ್ರಚೋದನೆ ನೀಡಿದ ಹಾಗೂ ಗೂಢಚರ್ಯೆ ಆರೋಪದ ಹಿನ್ನೆಲೆಯಲ್ಲಿ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್‌ಗೆ ಪಾಕ್ ಸೇನಾ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ಘೋಷಿಸಿರುವುದು ಭಾರತಕ್ಕೆ ಅಚ್ಚರಿ ಹಾಗೂ ಆಘಾತವನ್ನುಂಟು ಮಾಡಿದೆ. ಒಂದು ವೇಳೆ ಜಾಧವ್‌ಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದಲ್ಲಿ ಅದನ್ನು ‘ ಪೂರ್ವಯೋಜಿತ ಕೊಲೆ’ಯೆಂದೇ ತಾನು ಪರಿಗಣಿಸುವುದಾಗಿ ಹೊಸದಿಲ್ಲಿ ಈಗಾಗಲೇ ಪಾಕ್‌ಗೆ ಎಚ್ಚರಿಕೆ ನೀಡಿದೆ.
ಜಾಧವ್‌ಗೆ ಗಲ್ಲು ಶಿಕ್ಷೆ ಘೋಷಿಸಿರುವುದು, ಈಗಾಗಲೇ ಹದಗೆಟ್ಟಿರುವ ಉಭಯ ರಾಷ್ಟ್ರಗಳ ಬಾಂಧವ್ಯಕ್ಕೆ ಇನ್ನೊಂದು ದೊಡ್ಡ ಹೊಡೆತವಾಗಿದೆ. ಪಾಕ್ ಸೇನಾ ಕೋರ್ಟ್‌ನ ತೀರ್ಪಿನ ಬಗ್ಗೆ ಉಭಯ ದೇಶಗಳ ಮುಖಂಡರು, ರಾಜತಾಂತ್ರಿಕರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ.
ಜಾಧವ್‌ಗೆ ಪಾಕ್ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ಘೋಷಿಸಿದ ಬೆನ್ನಲ್ಲೇ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ಪಾಕ್ ಹೈಕಮೀಶನರ್ ಅಬ್ದುಲ್ ಬಾಸಿತ್ ಅವರನ್ನು ಕರೆಸಿಕೊಂಡಿದ್ದರು. ಯಾವುದೇ ವಿಶ್ವಸನೀಯ ಪುರಾವೆಗಳಿಲ್ಲದೆ ಜಾಧವ್ ವಿರುದ್ಧ ಕಾನೂನು ಕಲಾಪಗಳನ್ನು ನಡೆಸಲಾಗಿದೆಯೆಂದು ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವು ಈ ಮೊದಲು 1999ರಲ್ಲಿ ಶೇಖ್ ಶಮೀಮ್ ಎಂಬ ಭಾರತೀಯನನ್ನು, ಬೇಹುಗಾರಿಕೆಯ ಆರೋಪದಲ್ಲಿ ಗಲ್ಲಿಗೇರಿಸಿತ್ತು. ಇನ್ನು ಕೆಲವು ಮಂದಿ ಭಾರತೀಯರಿಗೂ ಅದು ಇದೇ ಆರೋಪದಲ್ಲಿ ಗಲ್ಲು ಶಿಕ್ಷೆನ್ನು ವಿಧಿಸಿದೆ. ಭಾರತವು ಈವರೆಗೆ ಹಲವಾರು ಪಾಕ್ ಬೇಹುಗಾರರನ್ನು ಬಂಧಿಸಿದ್ದರೂ, ಅವರಲ್ಲಿ ಯಾರಿಗೂ ಸಹ ಮರಣದಂಡನೆಯನ್ನು ಅದು ವಿಧಿಸಿಲ್ಲ.
ಜಾಧವ್‌ಗೆ ಗಲ್ಲು ಶಿಕ್ಷೆ ಘೋಷಿಸಿರುವುದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆಯೆಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರತಿಕ್ರಿಯಿಸಿದೆ. ಇತ್ತ ಹೊಸದಿಲ್ಲಿಯಲ್ಲಿ ಆಡಳಿತಾರೂಢ ಬಿಜೆಪಿ ಕೂಡಾ ಪಾಕ್ ಸೇನಾ ನ್ಯಾಯಾಲಯ ತೀರ್ಪನ್ನು ಖಂಡಿಸಿದ್ದು, ಅಕ್ರಮ ನ್ಯಾಯಾಲಯದಂತೆ ವರ್ತಿಸುವ ಮೂಲಕ ಇಸ್ಲಾಮಾಬಾದ್, ತನ್ನ ವಿಶ್ವಸನೀಯತೆಯನ್ನು ಜಾಗತಿಕವಾಗಿ ಒತ್ತೆಯಿಟ್ಟಿದೆಯೆಂದು ಹೇಳಿದೆ. ಜಾಧವ್‌ಗೆ ಯಾವುದೇ ನ್ಯಾಯವಾದಿಗಳ ನೆರವನ್ನು ಒದಗಿಸಲಾಗಿಲ್ಲ. ಆತ ಪಾಸ್‌ಪೋರ್ಟ್‌ನೊಂದಿಗೆ ಪ್ರಯಾಣಿಸುತ್ತಿದ್ದ. ಯಾವುದೇ ಪೂರಕ ಆಧಾರಗಳಿಲ್ಲದೆ, ಕೇವಲ ಪಾಕಿಸ್ತಾನದ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನೇ ಅವಲಂಭಿಸಿ ಜಾಧವ್ ವಿರುದ್ಧ ತೀರ್ಪು ನೀಡಲಾಗಿದೆಯೆಂದು ಬಿಜೆಪಿ ಟೀಕಿಸಿದೆ.
ಅಸ್ವೀಕಾರಾರ್ಹ: ತರೂರ್
ಜಾಧವ್‌ಗೆ ಗಲ್ಲು ಶಿಕ್ಷೆ ಪ್ರಕಟಿಸಿರುವ ಪಾಕ್‌ನ ಕ್ರಮವು ಅಸ್ವೀಕಾರಾರ್ಹವೆಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕ್ ಹಾಗೂ ಭಾರತ ಸೌಹಾರ್ದಪೂರ್ಣ ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸಬೇಕೆಂದು ಅವರು ಸಲಹೆ ಮಾಡಿದ್ದಾರೆ. ಈ ಮಧ್ಯೆ ಕೇಂದ್ರದ ಆಡಳಿತಾರೂಢ ಎನ್‌ಡಿಎ ಒಕ್ಕೂಟದ ಅಂಗಪಕ್ಷವಾದ ಶಿವಸೇನೆಯು, ಜಾಧವ್‌ನ ಬಿಡುಗಡೆಗೆ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದೆ. ಪಾಕಿಸ್ತಾನ ಸೇನಾ ನ್ಯಾಯಾಲಯದ ತೀರ್ಪು ದುಃಖಕರ, ಯಾತನಕಾರಿ ಹಾಗೂ ದ್ವೇಷಯುತವಾದುದಾಗಿದೆ. ಜಾಧವ್‌ನ ಬಿಡುಗಡೆ ಭಾರತಕ್ಕೆ ಸಾಧ್ಯವಾಗದೆ ಇರುವುದು ಇದಕ್ಕಿಂತಲೂ ಹೆಚ್ಚು ವಿಷಾದಕರವಾಗಿದೆಯೆಂದು, ಸೇನಾ ವಕ್ತಾರೆ ವಕ್ತಾರೆ ಮನೀಶಾ ಕಾಯಂಡೆ ಹೇಳಿದ್ದಾರೆ.
ಪಾಕ್ ಜನತೆಯ ಗಮನ ಬೇರೆೆ ಸೆಳೆಯುವ ಪ್ರಯತ್ನ: ಫಡ್ನವೀಸ್
ಪಾಕ್ ಸರಕಾರದ ವೈಫಲ್ಯಗಳಿಂದ ಪಾಕ್ ಜನತೆಯ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಜಾಧವ್‌ಗೆ ಗಲ್ಲು ಶಿಕ್ಷೆಯನ್ನು ಘೋಷಿಸಲಾಗಿದೆಯೆಂದು ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಇದೊಂದು ಬ್ಲಾಕ್ ಮೇಲ್ ಆಗಿದ್ದು, ಪಾಕಿಸ್ತಾನದಲ್ಲಿ ಏನೂ ಆಗಬಹುದೆಂಬುದಕ್ಕೆ ಜಾಧವ್ ಪ್ರಕರಣ ಸಾಕ್ಷಿಯಾಗಿದೆಯೆಂದು ಭಾರತದ ಬೇಹುಗಾರಿಕಾ ಸಂಸ್ಥೆ ರಾದ ಮಾಜಿ ವರಿಷ್ಠ ಎ.ಎಸ್. ಹೇಳಿದ್ದಾರೆ.
ಸಂಚುಗಾರರಿಗೆ ಇದೊಂದು ಎ್ಚರಿಕೆ: ಪಾಕ್ ರಕ್ಷಣಾ ಸಚಿವ ಆಸೀಫ್
ಪಾಕ್ ಸೇನಾನ್ಯಾಯಾಲಯದ ತೀರ್ಪನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಸಮರ್ಥಿಸಿಕೊಂಡಿದ್ದಾರೆ.ಜಾಧವ್‌ಗೆ ವಿಧಿಸಲಾಗಿರುವ ಮರಣದಂಡನೆಯು ಪಾಕ್ ವಿರುದ್ಧ ಸಂಚು ಹೂಡಿದವರಿಗೊಂದು ಎಚ್ಚರಿಕೆಯಾಗಿದೆಯೆಂದು ಹೇಳಿದ್ದಾರೆ. ಭಾರತವು ಕಾಶ್ಮೀರದ ಅಮಾಯಕ ಜನರ ಪೂರ್ವಯೋಜಿತ ಕಗ್ಗೊಲೆಗಳನ್ನು ನಡೆಸುತ್ತಿದೆಯೆಂದು ಆಸೀಫ್ ಆರೋಪಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಸಂಚು ಹೂಡಿದವರನ್ನು ಎಂದಿಗೂ ಬಿಡುವುದಿಲ್ಲವೆಂದು ಗುಡುಗಿದ್ದಾರೆ. ‘‘ಈ ದೇಶಕ್ಕಾಗಿ ಸೈನಿಕರು ಹಾಗೂ ಪಾಕಿಸ್ತಾನದ ನಾಗರಿಕರು ಅಪಾರ ತ್ಯಾಗ ಮಾಡಿದ್ದಾರೆ. ಭಯೋತ್ಪಾದಕರಿಗೆ ನೆರವಾಗುವವರ ಮತ್ತು ಅವರೊಂದಿಗೆ ಶಾಮೀಲಾಗಿರುವವರಿಗೆ ಸೂಕ್ತ ಪ್ರತ್ಯುತ್ತರ ನೀಡಬೇಕೆಂದು ಅವರ ಬಲಿದಾನಗಳು ನಮ್ಮನ್ನು ಆಗ್ರಹಿಸುತ್ತಿವೆ’’ ಎಂದಿದ್ದಾರೆ.ದು ಆಸೀಫ್ ಹೇಳಿದ್ದಾರೆ.
ಕಾನೂನು ಪ್ರಕಾರವೇ ಶಿಕ್ಷೆಯಾಗಿದೆ
ಕಾನೂನಿಗೆ ಅನುಗುಣವಾಗಿಯೇ ಜಾಧವ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆಯೆಂದು ಪ್ರಧಾನಿಯವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಝ್ ಹೇಳಿದ್ದಾರೆ. ಆದರೆ ಮರಣದಂಡನೆಯನ್ನು ಯಾವಾಗ ಜಾರಿಗೊಳಿಸಲಾಗುವುದು ಎಂದು ಈಗಲೇ ಹೇಳಲು ಸಾಧ್ಯವಾಗದು ಎಂದಿದ್ದಾರೆ.