ಗ್ರಾಹಕರು ಕೇಳಿದ್ದಷ್ಟೇ ಆಹಾರ ಬಡಿಸಿ: ಬರಲಿದೆ ಆಹಾರದ ಪೋಲು ತಡೆಗೆ ಹೊಸ ಕಾನೂನು
ಹೊಟೇಲ್‌ಗಳಲ್ಲಿ ಉಣಬಡಿಸುವ ಖಾದ್ಯಗಳ ಪ್ರಮಾಣ ನಿಗದಿಪಡಿಸಲು ಕೇಂದ್ರ ಸರಕಾರದ ಸಿದ್ಥತೆ

ಹೊಸದಿಲ್ಲಿ, ಎ.11: ಸ್ಟಾರ್ ಹೊಟೇಲ್‌ಗಳು ಹಾಗೂ ರೆಸ್ಟಾರೆಂಟ್‌ಗಳು ತಾವು ಗ್ರಾಹಕರಿಗೆ ಉಣಬಡಿಸುವ ಖಾದ್ಯಗಳ ಗಾತ್ರವನ್ನು ನಿಗದಿಪಡಿಸುವ ಬಗ್ಗೆ ಕೇಂದ್ರ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತನ್ನ ‘ಮನ್ ಕಿ ಬಾತ್’ ರೇಡಿಯೊ ಭಾಷಣದಲ್ಲಿ ಆಹಾರವು ಅನಗತ್ಯವಾಗಿ ಪೋಲಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
‘‘ ಓರ್ವ ವ್ಯಕ್ತಿ ಕೇವಲ ಎರಡು ಸಿಗಡಿಗಳನ್ನು ಮಾತ್ರ ತಿನ್ನಲು ಸಾಧ್ಯವಾಗುವುದಾದರೆ, ಆತನಿಗೆ ಆರು ಸಿಗಡಿಗಳನ್ನು ಬಡಿಸುವುದು ಎಷ್ಟು ಸರಿ?. ಓರ್ವ ವ್ಯಕ್ತಿಯು ಎರಡು ಇಡ್ಲಿಗಳನ್ನು ತಿನ್ನುವುದಾದರೆ, ಯಾಕೆ ನಾಲ್ಕು ಇಡ್ಲಿ ಬಡಿಸಬೇಕು? ಇದರಿಂದ ಆಹಾರ ಪೋಲಾಗುತ್ತದೆ ಮಾತ್ರವಲ್ಲ ಜನತೆ ತಾವು ತಿನ್ನದೆ ಇದ್ದುದಕ್ಕೂ ಹಣನ್ನು ಪಾವತಿಸಬೇಕಾಗುತ್ತದೆ’’ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಗ್ರಾಹಕರಿಗೆ ಉಣಬಡಿಸುವ ಖಾದ್ಯಗಳ ಪ್ರಮಾಣದ ಕುರಿತಾಗಿ ಹೊಟೇಲ್‌ಗಳು ಹಾಗೂ ರೆಸ್ಟಾರೆಂಟ್‌ಗಳಿಗೆ ಸಚಿವಾಲಯವು ಕರಡು ಪ್ರಶ್ನಾವಳಿಯೊಂದನ್ನು ಸಿದ್ಧಪಡಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
‘‘ ಆಹಾರ ವ್ಯರ್ಥವಾಗುತ್ತಿರುವ ಬಗ್ಗೆ ಪ್ರಧಾನಿಗೆ ತೀವ್ರ ಕಾಳಜಿಯಿದ್ದು, ಈ ಕುರಿತು ಹೊಟೇಲ್‌ಗಳಿಗೆ ನಾವು ಕಟ್ಟುಟ್ಟಿನಿಟ್ಟಿನ ಸೂಚನೆಗಳನ್ನು ನೀಡಲಿದ್ದೇವೆ’’ ಎಂದು ಪಾಸ್ವಾನ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ಸೂಚನೆಗಳು ಪ್ರಮಾಣಿತ ಹೊಟೇಲ್‌ಗಳಿಗೆ ಅನ್ವಯಿಸುವುದೇ ಹೊರತು ಸಾಮಾನ್ಯ ಥಾಲಿ ಊಟ ಒದಗಿಸುವ ಢಾಬಾ, ಮತ್ತಿತರ ಸಣ್ಣ ಹೊಟೇಲ್‌ಗಳಿಗೆ ಅನ್ವಯಿಸು ವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಕಳೆದ ತಿಂಗಳ ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ಪ್ರಧಾನಿ ಔತಣಕೂಟಗಳಲ್ಲಿ ಆಹಾರವನ್ನು ವ್ಯರ್ಥಗೊಳಿಸಲಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಹಾಗೂ ಹಾಗೆ ಮಾಡುವುದು ಬಡವರಿಗೆ ಅನಾ್ಯಯ ಮಾಡಿದಂತೆ ಎಂದು ಹೇಳಿದ್ದರು.
ತಾರಾ ಹೊಟೇಲ್‌ಗಳಲ್ಲಿ ಆಹಾರದ ಪ್ರಮಾಣವನ್ನು ನಿಗದಿಪಡಿಸುವ ಕಾನೂನನ್ನು ಗ್ರಾಹಕ ರಕ್ಷಣೆ ಕಾಯ್ದೆಯ ತಿದ್ದುಪಡಿಗಾಗಿ ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವಾಲಯವು ಸಿದ್ಧಪಡಿಸಿರುವ ನೂತನ ಕರಡು ವಿಧೇಯಕದಲ್ಲಿ ಸೇರ್ಪಡೆಗೊಳಿಸಲಾಗುವುದೆಂದು ಸಚಿವರು ಹೇಳಿದರು.
ಪ್ರಸ್ತಾಪಿತ ಕರಡು ವಿಧೇಯಕವು ಕಾನೂನು ಸಚಿವಾಲಯದ ಪರಿಶೀಲನೆಯಲ್ಲಿದೆಯೆಂದು ತಿಳಿಸಿದ ಪಾಸ್ವಾನ್, ತಪ್ಪುದಾರಿಗೆಳೆಯುವ ಜಾಹೀರಾತುಗಳಿಗಾಗಿ ಸಿಲೆಬ್ರಿಟಿಗಳಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸುವ ಪ್ರಸ್ತಾಪವನ್ನು ಸರಕಾರ ಕೈಬಿಟ್ಟಿದೆ. ಅದರ ಬದಲು ಉತ್ಪನ್ನಗಳ ತಯಾರಕರಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪದ ಬಗ್ಗೆ ಯೋಚಿಸಲಾಗುತ್ತಿದೆ ಎಂದರು.