ಪ್ರಿಯತಮೆಯನ್ನು ಕೊಂದ ಭಾರತ ಮೂಲದ ಸೈನಿಕನ ವಿಚಾರಣೆ ಆರಂಭ

ಲಂಡನ್, ಎ. 11: ತನ್ನ ಮಾಜಿ ಪ್ರಿಯತಮೆಯನ್ನು ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ ಗಂಟಲಿನ ಮೂಲಕ ಸೀಳಿ ಕೊಂದ 26 ವರ್ಷದ ಭಾರತೀಯ ಮೂಲದ ಬ್ರಿಟನ್ ಸೈನಿಕನ ವಿಚಾರಣೆ ನಡೆಯುತ್ತಿದೆ.
ಲ್ಯಾನ್ಸ್ ಕಾರ್ಪೋರಲ್ ತ್ರಿಮಾನ್ ಹ್ಯಾರಿ ಧಿಲ್ಲೋನ್‌ನ ‘ದೌರ್ಜನ್ಯ’ ಮತ್ತು ‘ಹಸ್ತಕ್ಷೇಪ’ ನಡೆಸುವ ಬುದ್ಧಿಯಿಂದ ಬೇಸತ್ತು ಆತನ ಪ್ರಿಯತಮೆ ಆಲಿಸ್ ರಗಲ್ ಸಂಬಂಧವನ್ನು ಕೊನೆಗೊಳಿಸಿದ್ದರು ಎಂದು ನ್ಯೂಕ್ಯಾಸಲ್ ಕ್ರೌನ್ ನ್ಯಾಯಾಲಯಕ್ಕೆ ತಿಳಿಸಲಾಯಿತು.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಈಶಾನ್ಯ ಇಂಗ್ಲೆಂಡ್‌ನಲ್ಲಿ ಹತ್ಯೆ ನಡೆದಿದೆ.
‘‘ಆರೋಪಿಯು ಮೊದಲಿನಿಂದಲೇ ದೌರ್ಜನ್ಯ ನಡೆಸುವ, ನಿಯಂತ್ರಣ ಸಾಧಿಸುವ ಹಾಗೂ ಹಸ್ತಕ್ಷೇಪ ನಡೆಸುವ ವ್ಯಕ್ತಿತ್ವವನ್ನು ಹೊಂದಿದ್ದನು. ಆಲಿಸ್ ಓರ್ವ ಉತ್ಸಾಹದ ತಮಾಷೆ ಪ್ರವೃತ್ತಿಯ ಹುಡುಗಿಯಾಗಿದ್ದಳು ಎಂಬುದಾಗಿ ಆಕೆಯನ್ನು ಬಲ್ಲವರು ಹೇಳುತ್ತಾರೆ. ಆದರೆ, ಸಾವಿಗೆ ತಿಂಗಳುಗಳ ಮುಂಚೆ ಆಕೆಯ ವ್ಯಕ್ತಿತ್ವದಲ್ಲಿ ಸಂಪೂರ್ಣ ಬದಲಾವಣೆಯಾಗಿತ್ತು. ಇದಕ್ಕೆ ಹ್ಯಾರಿ ಧಿಲ್ಲೋನ್ ಜೊತೆಗಿನ ಆಕೆಯ ಸಂಬಂಧವೇ ಕಾರಣವಾಗಿತ್ತು.
ಸಂಬಂಧವನ್ನು ಕೊನೆಗೊಳಿಸಿದ ಬಳಿಕ ಆರೋಪಿಯ ವರ್ತನೆಯಿಂದಾಗಿ ಆಕೆ ಅಂತರ್ಮುಖಿಯಾಗಿದ್ದರು, ಬೇರೆಯವರೊಂದಿಗೆ ಬೆರೆಯುತ್ತಿರಲಿಲ್ಲ ಹಾಗೂ ಸಂಕಷ್ಟಕ್ಕೀಡಾಗಿದ್ದರು’’ ಎಂದು ಪ್ರಾಸಿಕ್ಯೂಟರ್ ರಿಚರ್ಡ್ ರೈಟ್ ನ್ಯಾಯಾಲಯಕ್ಕೆ ಹೇಳಿದರು.
ತನ್ನ ಸೇನೆಯ ಅನುಭವವನ್ನು ಬಳಸಿಕೊಂಡ ಧಿಲ್ಲೋನ್, ತನ್ನ ಮಾಜಿ ಪ್ರಿಯತಮೆಯ ಇಮೇಲ್‌ಗಳು, ಫೋನ್ ಸಂದೇಶಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಕನ್ನ ಹಾಕಿದ್ದನು.
ಕೆಲವು ದಿನಗಳ ಬಳಿಕ ಆಕೆ ತನ್ನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.







