ಎ.13 ರಂದು ನೀರಿನ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಧರಣಿ
ಮಂಗಳೂರು, ಎ.11: ಮನಪಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಮತ್ತು ಸಿಪಿಎಂ ಜಿಲ್ಲಾ ಸಮಿತಿ ವತಿಯಿಂದ ಎ.13ರಂದು ಬೆಳಗ್ಗೆ 10 ಗಂಟೆಗೆ ಪಾಲಿಕೆಗೆ ಮುತ್ತಿಗೆ ಹಾಕುವುದಾಗಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನೀರಿನ ಕೃತಕ ಅಭಾವವನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿ, ನೀರನ್ನು ನಿಯಮಿತವಾಗಿ ಜನತೆಗೆ ಪೂರೈಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು.ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದರು.
ಪಾಲಿಕೆಗೆ ಪ್ರತೀ ವರ್ಷದ ಬಜೆಟ್‌ನಲ್ಲಿ ಕೆರೆ ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಂತರ ರೂ.ಹಾಗೂ ಕೆರೆ ಶುಲ್ಕ ಹೆಸರಿನಲ್ಲಿ ಲಕ್ಷಾಂತರ ರೂ. ಸಂಗ್ರಹವಾಗುತ್ತಿದ್ದರೂ ನಗರದಲ್ಲಿ ಯಾವುದೇ ಕೆರೆಗಳ ಅಭಿವೃದ್ಧಿ ಆಗಿಲ್ಲ. ಕೆಲವು ಕೆರೆಗಳಲ್ಲಿ ಸಾಕಷ್ಟು ನೀರಿದ್ದರೂ ಸರಿಯಾದ ಸದ್ಬಳಕೆಯಾಗುತ್ತಿಲ್ಲ.ಸರಕಾರಿ ಬಾವಿಗಳನ್ನು ಇನ್ನೂ ಪುನರ್ ನವೀಕರಣಗೊಳಿಸಿಲ್ಲ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರದ ದಕ್ಷಿಣ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಉಪಾಧ್ಯಕ್ಷ ನೌಷಾದ್ ಬೆಂಗ್ರೆ, ಸಿಪಿಎಂ ನಗರ ದಕ್ಷಿಣ ಸಮಿತಿ ಸದಸ್ಯರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ ಉಪಸ್ಥಿತರಿದ್ದರು.







