ಭಾರತ-ಪಾಕ್ ಬಾಂಧವ್ಯದ ಮೇಲೆ ಗಂಭೀರ ಪರಿಣಾಮ: ಸುಷ್ಮಾ

ಹೊಸದಿಲ್ಲಿ, ಎ.11: ಬೇಹುಗಾರಿಕೆ ಹಾಗೂ ವಿಧ್ವಂಸಕ ಕೃತ್ಯದ ಸಂಚಿನ ಆರೋಪದಲ್ಲಿ ಭಾರತದ ನೌಕಾಪಡೆಯ ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್‌ಗೆ ಗಲ್ಲು ಶಿಕ್ಷೆ ಘೋಷಿಸಿರುವುದನ್ನು ಸಂಸತ್‌ನ ಉಭಯ ಸದನಗಳು ಸೋಮವಾರ ಒಕ್ಕೊರಲಿನಿಂದ ಖಂಡಿಸಿವೆ. ಪಾಕಿಸ್ತಾನವು ಜಾಧವ್‌ಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಿದರೆ, ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆಯೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಅವರು ಕುಲಭೂಷಣ್ ಜಾಧವ್ ತಪ್ಪು ಮಾಡಿದ್ದಾರೆಂಬುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ಜಾಧವ್ ವಿರುದ್ಧ ಪಾಕ್ ಸೇನಾ ನ್ಯಾಯಾಲಯ ಹೊರಿಸಿದ ಆರೋಪ ಕಪೋಲಕಲ್ಪಿತವಾಗಿದೆಯೆಂದರು. ಒಂದು ವೇಳೆ ಜಾಧವ್‌ಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಿದ್ದೇ ಆದಲ್ಲಿ ಅದೊಂದು ಪೂರ್ವಯೋಜಿತಕೊಲೆಯಾಗಲಿದೆ ಎಂದರು. ಜಾಧವ್‌ನನ್ನು ಬಂಧಮುಕ್ತಗೊಳಿಸಲು ಭಾರತವು, ಪಾಕ್ ನ್ಯಾಯಾಲಯ ಹಾಗೂ ಪಾಕ್ ಸರಕಾರದ ಮೊರೆಹೋಗಲಿದೆ. /ಯಾವುದೇ ಬೆಲೆ ತೆತ್ತಾದರೂ , ಜಾಧವ್ ಭಾರತದ ಪುತ್ರ. ಯಾವುದೇ ಬೆಲೆ ತೆತ್ತಾದರೂ, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಸರಕಾರ ನಡೆಸಲಿದೆಯೆಂದು ಸುಷ್ಮಾ ಹೇಳಿದರು. ಭಯೋತ್ಪಾದನೆಗೆ ಪ್ರಾಯೋಜಕತ್ವ ಹಾಗೂ ಬೆಂಬಲ ನೀಡುತ್ತಿರುವ ದಾಖಲೆ ಹೊಂದಿರುವ ಪಾಕಿಸ್ತಾನವು, ಅಂತಾರಾಷ್ಟ್ರೀಯ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದು, ಅದಕ್ಕೆ ಜಾಧವ್ ಬಲಿಪಶುವಾಗಿದ್ದಾರೆಂದು ಸ್ವರಾಜ್ ಆಕ್ರೋಶ ವ್ಯಕ್ತಪಡಿಸಿದರು
ಲೋಕಸಭೆಯಲ್ಲಿಯೂ ಈ ಬಗ್ಗೆ ಹೇಳಿಕೆ ನೀಡಿದ ಬಳಿಕ ಅವರು ಜಾಧವ್‌ಗೆ ಗಲ್ಲು ಶಿಕ್ಷೆ ಘೋಷಿಸುವ ಪಾಕ್ ಸೇನಾ ನ್ಯಾಯಾಲಯ ತೀರ್ಪನ್ನು ಖಂಡಿಸುವ ನಿರ್ಣಯವನ್ನು ಸಿದ್ಧಪಡಿಸಲು ಲೋಕಸಭೆಯ ಕಾಂಗ್ರೆಸ್ ಸಂಸದ ಶಶಿಥರೂರ್ ಅವರ ನೆರವನ್ನು ಸ್ವರಾಜ್ ಈ ಸಂದರ್ಭದಲ್ಲಿ ಕೋರಿದರು. ಸದನ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅನುಮತಿಯನ್ನು ಪಡೆದ ಬಳಿಕ ತರೂರ್ ಸಂತಸದಿಂದಲೇ ನಿರ್ಣಯ ಸಿದ್ಧಪಡಿಸಲು ನೆರವಾದರು.





