ಸರಕಾರದ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ ಘೋಷಣೆ
220 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ
ಬೆಂಗಳೂರು, ಎ.11: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ರಾಜ್ಯ ಸರಕಾರದ ವತಿಯಿಂದ ಮೊದಲ ಬಾರಿಗೆ ಎ.17ರಂದು ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮಂಗಳವಾರ ನಗರದ ಪಾಲಿಕೆ ಆವರಣದ ಡಾ.ರಾಜ್‌ಕುಮಾರ್ ಗಾಜಿನಮನೆಯಲ್ಲಿ ಆಯೋಜಿಸಿದ್ದ ಕೆಂಪೇಗೌಡ ದಿನಾಚರಣೆ ಸಮಾರಂಭದಲ್ಲಿ ಸಾಧಕರಿಗೆ "ಕೆಂಪೇಗೌಡ ಪ್ರಶಸ್ತಿ" ಪ್ರದಾನಿಸಿ ಅವರು ಮಾತನಾಡುತ್ತಿದ್ದರು.
ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಎ.17ರಂದು ಆಚರಣೆ ಮಾಡಲು ಸರಕಾರ ಉದ್ದೇಶಿಸಿದೆ. ಜಯಂತಿ ಆಚರಣೆಗೆ ಅದಿಚುಂಚನಗಿರಿ ಸ್ವಾಮೀಜಿಗಳ ಅಭಿಪ್ರಾಯವನ್ನು ಪಡೆಯಲಾಗಿದೆ. ಅವರು ಕೂಡ ಕೆಂಪೇಗೌಡರ ಜಯಂತಿಯನ್ನು ಎ.17ರಂದು ಆಚರಿಸುವಂತೆ ಸೂಚಿಸಿದ್ದಾರೆ. ಸರಕಾರದ ವತಿಯಿಂದ ಇದೇ ಮೊದಲ ಬಾರಿಗೆ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಬೆಂಗಳೂರು ಅಭಿವೃದ್ಧಿಗಾಗಿ ಈ ವರ್ಷದಲ್ಲಿ 7,300 ಕೋಟಿ ರೂ. ಅನುದಾನ ನೀಡಲಾಗಿದೆ. ಡಿಸೆಂಬರ್ ವೇಳೆಗೆ ಈ ಅನುದಾನವನ್ನು ಪಾಲಿಕೆ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.
ಬ್ರಾಂಡ್ ಬೆಂಗಳೂರು ಹೆಸರನ್ನು ಉಳಿಸಲು ಸಾರ್ವಜನಿಕರ ಹಿತಾಸಕ್ತಿ ಮುಖ್ಯ. ಬೆಂಗಳೂರನ್ನು ಸ್ಮಾರ್ಟ್ ಸಿಟಿ ಮಾಡಲು ಸಂಕಲ್ಪ ತೊಡಬೇಕು. "ಗಾರ್ಡನ್ ಸಿಟಿ"ಗೆ "ಗಾರ್ಬೇಜ್ ಸಿಟಿ" ಎಂಬ ಕೆಟ್ಟ ಹೆಸರು ಬರುವುದು ಬೇಡ. ಸುಂದರ ನಗರ ನಿರ್ಮಾಣ ಮಾಡಲು ಮನಸ್ಸು ಮಾಡಬೇಕು ಎಂದು ಕರೆಕೊಟ್ಟ ಅವರು, ನಗರದಲ್ಲಿ ಕಸದ ಸಮಸ್ಯೆಯನ್ನು ನಿವಾರಣೆ ಮಾಡಲು ಎಷ್ಟು ಹಣ ಬೇಕಾದರೂ ನೀಡಲು ಸಿದ್ಧ ಎಂದು ಭರವಸೆ ನೀಡಿದರು.
ನಗರದಲ್ಲಿ ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆ. ಇದನ್ನು ತಪ್ಪಿಸಲು ನಾಗರಿಕರು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು. ಇದಕ್ಕಾಗಿ ಈ ವರ್ಷದಲ್ಲಿ ಬಿಎಂಟಿಸಿ ಸಂಸ್ಥೆಗೆ ಹೆಚ್ಚುವರಿಯಾಗಿ ಮೂರು ಸಾವಿರ ಬಸ್ಸುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಕುಡಿಯುವ ನೀರನ್ನು ಇತರೆ ಕೆಲಸಗಳಿಗೆ ಬಳಸದಂತೆ ನಾಗರಿಕರು ಎಚ್ಚರಿಕೆ ವಹಿಸಿಬೇಕು. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ ಕುರಿತು ಜಾಗೃತಿ ಮೂಡಿಸಲು ಸರಕಾರದಿಂದ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕೇತ್ರಗಳಲ್ಲಿ ಸಾಧನೆಗೈದ 220 ಮಂದಿಗೆ ಕೆಂಪೇಗೌಡ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳು ಪ್ರದಾನಿಸಿದರು. ಈ ವೇಳೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ, ಉಪಮೇಯರ್ ಆನಂದ್ ಸೇರಿದಂತೆ ಇತರರು ಇದ್ದರು.
ಇಂದಿರಾ ಕ್ಯಾಂಟೀನ್ ರಾಜ್ಯಾದ್ಯಂತ ವಿಸ್ತರಣೆ
ಬಡವರಿಗೆ -ಕಾರ್ಮಿಕರಿಗೆ ಮತ್ತು ದೂರದ ಊರಿನಿಂದ ಬಂದವರಿಗೆ ಅನುಕೂಲವಾಗುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಊಟ-ತಿಂಡಿ ಉದ್ದೇಶಿಸಿರುವ ಇಂದಿರಾ ಕ್ಯಾಂಟೀನನ್ನು ರಾಜ್ಯದ ಇತರ ನಗರಗಳಿಗೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ. ನಗರದ 198 ವಾರ್ಡ್‌ಗಳಲ್ಲಿ ಇನ್ನು ಎರಡು ತಿಂಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ಆರಂಭಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಾಧಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 158 ಮಂದಿ ಸಾಧಕರನ್ನು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮೇಯರ್ ಸೋಮವಾರ ಪ್ರಕಟಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆ ಸಂಖ್ಯೆ 220ಕ್ಕೆ ಏರಿಕೆಯಾಗಿತ್ತು. ಅಷ್ಟಲ್ಲದೆ, ಬುಧವಾರ ಇನಷ್ಟು ಸಾಧಕರು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.