ಎ.14: ಉಚಿತ ಪವರ್ ಪ್ರೆಪ್ ಕಾರ್ಯಾಗಾರ
ಮಂಗಳೂರು, ಎ.11: ಮಂಗಳೂರಿನ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ (ಎನ್‌ಐಎ) ತನ್ನ ವಿಸ್ತರಣೆ ಯೋಜನೆಯ ಅಂಗವಾಗಿ ಕರಾವಳಿ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಉಚಿತ ಪವರ್ ಪ್ರೆಪ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. "ನಾಟಾ-2017 ಗೆಲ್ಲುವುದು ಹೇಗೆ" ಎಂಬ ವಿಷಯದ ಬಗ್ಗೆ ಎ.14ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಾರ್ಯಾಗಾರ ನಡೆಯಲಿದೆ.
ಡಿಕ್ಯೂ ಪ್ರಯೋಗಾಲಯ ಈ ಕಾರ್ಯಾಗಾರ ನಡೆಸಿಕೊಡಲಿದ್ದು, ಡ್ರಾಯಿಂಗ್ ಆಪ್ಟಿಟ್ಯುಟ್ ಹಾಗೂ ಗಣಿತದ ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗೋಪಾಯಗಳು ಮತ್ತು ತಂತ್ರಗಳ ಬಗ್ಗೆ ಇದರಲ್ಲಿ ಮಾರ್ಗದರ್ಶನ ನೀಡಲಾಗುವುದು. 2ಡಿ ಡ್ರಾಯಿಂಗ್, 3ಡಿ ಡ್ರಾಯಿಂಗ್, ಥೀಮ್ ಸ್ಕೆಚ್, ವಿಷುವಲ್ ಸ್ಪೆಷಲ್ ಎಬಿಲಿಟಿ, ಮೆಂಟಲ್ ಎಬಿಲಿಟಿ ಹಾಗೂ ವಾಸ್ತುಶಿಲ್ಪ ಅರಿವು ವಿಷಯಗಳನ್ನು ಕಾರ್ಯಾಗಾರ ಒಳಗೊಳ್ಳಲಿದೆ.
ಸೆಷನ್‌ನ ಕೊನೆಗೆ ವಿದ್ಯಾರ್ಥಿಗಳಿಗೆ ಉಚಿತ ಮಾದರಿ ಪರೀಕ್ಷೆ ನಡೆಸಿ, ಅವರ ಸಾಮರ್ಥ್ಯ ಹಾಗೂ ಕೌಶಲಮಟ್ಟವನ್ನು ಮಾಪನ ಮಾಡಲಾಗುವುದು. ಸಂಭಾವ್ಯ ನಾಟಾ-2017 ಪರೀಕ್ಷೆಯ ಪ್ರಶ್ನೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಸೃಜನಶೀಲತೆ, ಡ್ರಾಯಿಂಗ್ ಕೌಶಲ, ವಿಷ್ಯುವಲ್ ಸ್ಪೆಷಲ್ ಎಬಿಲಿಟಿ, ವಿಶ್ಲೇಷಣಾ ಮತ್ತು ತಾರ್ಕಿಕ ಸಾಮರ್ಥ್ಯ, ವಾಕ್ ಸಾಮರ್ಥ್ಯದ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗುವುದು. ಕಾರ್ಯಾಗಾರವನ್ನು ಡಿಕ್ಯೂ ಲ್ಯಾಬ್‌ನ ನಿರ್ದೇಶಕ ಶಾನ್ ಡೇಸಾ ಮತ್ತು ಲಿಯೆನ್ ರಾಡ್ರಿಗಸ್ ನಡೆಸಿಕೊಡುವರು.
ವಾಸ್ತುಶಿಲ್ಪದಲ್ಲಿ ಪದವಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ನಾಟಾ ಪರೀಕ್ಷೆ ಉತ್ತೀರ್ಣರಾಗುವುದು ಅಗತ್ಯ. ಇದಕ್ಕೂ ಮುನ್ನ ಎನ್‌ಐಎ 2017ರ ಜನವರಿಯಲ್ಲಿ ಉಚಿತ ಎನ್‌ಎಟಿಎ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆಸಕ್ತರು ಡಿಕ್ಯೂ ಪ್ರಯೋಗಾಲಯದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು (ಮೊ.ಸಂ.:9008301061) ಎಂದು ಪ್ರಕಟನೆ ತಿಳಿಸಿದೆ.







