'ಧರ್ಮಸ್ಥಳ ಯೋಜನೆಯಿಂದ ಜಿಲ್ಲೆಯ 10 ಕೆರೆಗಳ ಪುನಶ್ಚೇತನ'
ತುಮಕೂರು,ಎ.11: ತುಮಕೂರು ಜಿಲ್ಲೆಯ ತಾಲೂಕಿಗೆ ತಲಾ ಒಂದು ಕೆರೆಗಳಂತೆ ಒಟ್ಟು 10 ಕೆರೆಗಳ ಪುನಶ್ಚೇತನ ಕಾರ್ಯಕ್ರಮವನ್ನು ಧರ್ಮಸ್ಥಳ ಯೋಜನೆ ಕೈಗೆತ್ತಿಕೊಂಡಿದೆ ಎಂದು ಯೋಜನೆಯ ನಿರ್ದೇಶಕ ದಿನೇಶ್ ಪೂಜಾರಿ ತಿಳಿಸಿದ್ದಾರೆ.
ಹುಳಿಯಾರು ಹೋಬಳಿ ನಂದಿಹಳ್ಳಿ ಗ್ರಾಮದ ಕೆರೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ "ನಮ್ಮ ಊರು ನಮ್ಮಕೆರೆ" ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಈ ಯೋಜನೆಯಿಂದ ಐದಾರು ವರ್ಷಗಳಿಂದ ಗಿಡ ವಿತರಣೆ, ಕೃಷಿ ಸಲಕರಣೆ ವಿತರಣೆ, ಮಕ್ಕಳಿಗೆ ಸುಜ್ಞಾನ ನಿಧಿ, ಶಿಷ್ಯ ವೇತನ ವಿತರಣೆ, ಶಾಲಾ ಕಾಲೇಜುಗಳಿಗೆ ಪಿಠೋಪಕರಣ, ಶಾಲಾ ಕಟ್ಟಡಗಳಿಗೆ ಅನುದಾನ, ಹಿಂದೂ ರುದ್ರಭೂಮಿಗೆ ಅನುದಾನ, ಗ್ರಾಮದ ದೇವಸ್ಥಾನ ಅಭಿವೃದ್ಧಿಗೆ ಅನುದಾನ,ಇನ್ನಿತರ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದೆ ಎಂದು ಮಾಹಿರಿ ನೀಡಿದರು.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ತುಮಕೂರು ಜಿಲ್ಲೆಯ 10 ಕೆರೆಗಳನ್ನು ಆಯ್ಕೆ ಮಾಡಲಾಗಿದೆ ಚಿಕ್ಕನಾಯಕನಹಳ್ಳಿ ತಾಲೊಕಿನ ನಂದಿಹಳ್ಳಿ ಗ್ರಾಮದ ಕೆರೆ ಒಳಪಟ್ಟಿದೆ. ಪ್ರತಿಯೊಂದು ಕೆರೆಯ ಪುನಶ್ಚೇತನಕ್ಕೆ 6. ಲಕ್ಷದ ಕ್ರಿಯಾ ಯೋಜನೆ ತಯಾರಿಸಿದ್ದು ಗ್ರಾಮದ ಸಹಭಾಗಿತ್ವದೊಂದಿಗೆ ಕೆರೆಯ ಹೂಳೆತ್ತುವ ಕಾರ್ಯ ಮಾಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಿ. ದೇವರಾಜು ಮಾತನಾಡಿ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದಲ್ಲೇ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ಸಂಘ ರಚನೆ, ಜೀವನ ನಿರ್ವಹಣೆ ಸಾಲ ವಿತರಣೆ, ಅಭಿವೃದ್ದಿ ಕೆಲಸಗಳನ್ನು ನಿರ್ವಹಿಸುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್, ಮೇಲ್ವೀಚಾರಕ ಸಂತೋಷ್, ಗೋಪಿ, ಗ್ರಾಮದ ಗೌಡ ನಂದೀಶಪ್ಪ, ಮುಖಂಡರಾದ ಮಲ್ಲೇಶಪ್ಪ, ಹೂನ್ನಪ್ಪ, ಒಕ್ಕೂಟದ ಅಧ್ಯಕ್ಷ ಬಸವರಾಜು, ಮಲ್ಲಿಕಾರ್ಜುನಯ್ಯ, ಮತ್ತಿತರರು ಹಾಜರಿದ್ದರು.







