‘ಟಿವಿಗಳ ಮೂಲಕ ಜ್ಯೋತಿಷ್ಯ ವಿದ್ಯೆಗೆ ಅಪಚಾರ ಸಲ್ಲದು’

ಪಡುಬಿದ್ರೆ, ಎ.11: ಜ್ಯೋತಿಷ್ಯ ಕಾರ್ಯಕ್ರಮಕ್ಕೆ ಸಂಬಂಧಿ ಸಿದಂತೆ ಟಿವಿ ಮಾಧ್ಯಮಗಳನ್ನು ದೂರಿ ಪ್ರಯೋಜನವಿಲ್ಲ. ಅದರಲ್ಲಿ ಭಾಗವಹಿಸುವ ಜ್ಯೋತಿಷಿಗಳ ಬಗ್ಗೆ ನಾವು ಮಾತ ನಾಡಬೇಕಿದೆ. ಜ್ಯೋತಿಷ್ಯ ವಿದ್ಯೆಗೆ ಈ ರೀತಿಯಲ್ಲಿ ಅಪಚಾರ ಮಾಡಬಾರದು. ಇದರಿಂದ ಜನರಿಗೆ ಅದರ ಬಗ್ಗೆ ತಪ್ಪು ತಿಳುವಳಿಕೆ ಮೂಡುತ್ತದೆ ಎಂದು ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪಲಿಮಾರು ಮಠದಲ್ಲಿ ಮಂಗಳವಾರ ಆಯೋಜಿಸಲಾದ ಹನುಮ ಜಯಂತಿ ಮಹೋತ್ಸವದಲ್ಲಿ ತಮಿಳುನಾಡು ಶ್ರೀರಂಗಮ್‌ನ ವೇದಮೂರ್ತಿ ಅವಧಾನಿ ಭೀಮಾಚಾರ್ಯರಿಗೆ ‘ಶ್ರೀರಾಜರಾಜೇಶ್ವರಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.
ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮಗು ಹುಟ್ಟಿದ ನಂತರ ಮಾಡುವ ಸಂಸ್ಕಾರಕ್ಕಿಂತ ಮಗು ಗರ್ಭದಲ್ಲಿರುವಾಗ ಮಾಡುವ ಸಂಸ್ಕಾರಕ್ಕೆ ನಾವು ಹೆಚ್ಚಿನ ಒತ್ತು ನೀಡಬೇಕಿದೆ. ಜಗತ್ತಿನ ಪ್ರತಿಯೊಂದು ವಸ್ತುಗಳಿಗೂ ಸಂಸ್ಕಾರ ಎಂಬುದು ಅತಿಮುಖ್ಯ ಎಂದರು. ಈ ಸಂದರ್ಭದಲ್ಲಿ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ರವೀಂದ್ರ ಭಟ್ ಹೆರ್ಗ, ಅಗ್ರಹಾರ ಲಕ್ಷ್ಮೀ ನಾರಾಯಣ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.







