ನಾಳೆ ನ್ಯಾಯವಾದಿಗಳ ಸಹಕಾರಿ ಸಂಘ ಉದ್ಘಾಟನೆ
ಮಂಗಳೂರು, ಎ.11: ಮಂಗಳೂರು ವಕೀಲರ ಸಂಘದ ನ್ಯಾಯವಾದಿಗಳ ಸೌಹಾರ್ದ ಸಹಕಾರಿ (ನಿ) ಇದರ ಉದ್ಘಾಟನೆಯು ಎ.13ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಸುಮಾನಾ ಶರಣ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್.ಬೀಳಗಿ ಸಂಘವನ್ನು ಉದ್ಘಾಟಿಸಲಿದ್ದು, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ನ್ಯಾಯವಾದಿಗಳಾದ ಎಸ್. ಪಿ.ಚಂಗಪ್ಪ, ಎಚ್.ವಿ. ರಾಘವೇಂದ್ರ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 2ಕ್ಕೆ ಸಹಕಾರಿ ಸಂಘದ ಮೊದಲ ಮಹಾಸಭೆ ನಡೆಯಲಿದೆ ಎಂದರು.
ವಕೀಲರಿಗೆ ಅಗತ್ಯವಿರುವ ಸಾಲ, ಠೇವಣಿ, ಇ-ಸ್ಟಾಂಪ್, ವಕಾಲತು, ಕೋರ್ಟ್‌ಗೆ ಸಂಬಂಧಪಟ್ಟ ಎಲ್ಲ ಅರ್ಜಿಗಳು, ವೆಲ್ಫೇರ್ ಸ್ಟಾಂಪ್ ಮತ್ತಿತರ ಸೇವೆಗಳನ್ನು ಒದಗಿಸುವುದು ಸಂಘದ ಉದ್ದೇಶ. ಸೌಹಾರ್ದ ಕಾಯ್ದೆಯಡಿ ನ್ಯಾಯವಾದಿಗಳ ಸೌಹಾರ್ದ ಸಹಕಾರಿಯು ಕರಾವಳಿ ಪ್ರದೇಶದಲ್ಲಿ ತಮ್ಮ ಸಂಘಟನೆ ಮೊದಲನೆಯದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ನ್ಯಾಯವಾದಿಗಳ ಸಹಕಾರಿ ಸಂಘದ ಉಪಾಧ್ಯಕ್ಷ ಅನಿಲ್‌ಕುಮಾರ್ ಕೆ., ನಿರ್ದೇಶಕರಾದ ಜಿನೇಂದ್ರ, ಎಚ್.ವಿ.ರಾಘವೇಂದ್ರ, ಮೊದಲಾದವರು ಉಪಸ್ಥಿತರಿದ್ದರು.







