ಡೆವಿಲ್ಸ್‌ಗೆ ಬೆದರಿದ ಪುಣೆ ಸೂಪರ್‌ಜೈಂಟ್
ಸ್ಯಾಮ್ಸನ್ ಶತಕ, ಮಿಂಚಿದ ಝಹೀರ್

ಪುಣೆ, ಎ.11: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಶತಕ(102, 63 ಎಸೆತ ),ಆಲ್‌ರೌಂಡರ್ ಮೊರಿಸ್(ಅಜೇಯ 38, 9 ಎಸೆತ, 4 ಬೌಂಡರಿ, 3 ಸಿಕ್ಸರ್), ನಾಯಕ ಝಹೀರ್ ಖಾನ್(3-20) ಹಾಗೂ ಅಮಿತ್ ಮಿಶ್ರಾ(3-11) ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ವಿರುದ್ಧ 97 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಮಂಗಳವಾರ ಟಾಸ್ ಜಯಿಸಿದ ಪುಣೆ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಡೆಲ್ಲಿ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಡೆಲ್ಲಿ ತಂಡ ಸ್ಯಾಮ್ಸನ್ ಶತಕದ ಸಹಾಯದಿಂದ 4 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.
ತವರು ನೆಲದಲ್ಲಿ ಗೆಲ್ಲಲು ಕಠಿಣ ಗುರಿ ಪಡೆದ ಪುಣೆ ತಂಡ ಯಾವ ಹಂತದಲ್ಲೂ ಹೋರಾಟವನ್ನೇ ನೀಡದೆ ಝಹೀರ್‌ಖಾನ್(3-20), ಅಮಿತ್ ಮಿಶ್ರಾ(3-11) ಹಾಗೂ ಕಮಿನ್ಸ್(2-24) ದಾಳಿಗೆ ತತ್ತರಿಸಿ 16.1 ಓವರ್‌ಗಳಲ್ಲಿ ಕೇವಲ 108 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಪುಣೆ ತಂಡದ ಪರ ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್(20) ಅಗ್ರ ಸ್ಕೋರರ್ ಎನಿಸಿಕೊಂಡರು. ರಜತ್ ಭಾಟಿಯ(16),ಚಾಹರ್(14), ರಹಾನೆೆ(10), ತ್ರಿಪಾಠಿ(10)ಹಾಗೂ ಧೋನಿ(11) ಎರಡಂಕೆ ಸ್ಕೋರ್ ದಾಖಲಿಸಿದರು. ಧೋನಿ ಹಾಗೂ ಭಾಟಿಯ ಆರನೆ ವಿಕೆಟ್‌ಗೆ ಗರಿಷ್ಠ 25 ರನ್ ಜೊತೆಯಾಟ ನಡೆಸಿದರು.
ಡೆಲ್ಲಿ 205/4: ಇದಕ್ಕೆ ಮೊದಲು ಅಂತಿಮ 2 ಓವರ್‌ಗಳಲ್ಲಿ ಒಟ್ಟು 45 ರನ್ ಗಳಿಸಿದ ಡೆಲ್ಲಿ 20 ಓವರ್‌ಗಳಲ್ಲಿ 205 ರನ್ ಗಳಿಸಿತು. ಮೊರಿಸ್ ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದರು. 19ನೆ ಓವರ್‌ನಲ್ಲಿ ಝಾಂಪ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ಕೇರಳದ ಬ್ಯಾಟ್ಸ್‌ಮನ್ ಸ್ಯಾಮ್ಸನ್ ಈವರ್ಷದ ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದರು. ಶತಕ ಪೂರೈಸಿದ ಬೆನ್ನಿಗೇ ಝಾಂಪಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮೊದಲು 63 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಿಡಿಸಿದರು.
2ನೆ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ಆಟಗಾರ ಆದಿತ್ಯ ತಾರೆ(0) ವಿಕೆಟ್‌ನ್ನು ಕಳೆದುಕೊಂಡ ಡೆಲ್ಲಿ ಕಳಪೆ ಆರಂಭ ಪಡೆದಿತ್ತು. ಎರಡನೆ ವಿಕೆಟ್‌ಗೆ 69 ರನ್ ಜೊತೆಯಾಟ ನಡೆಸಿದ ಬಿಲ್ಲಿಂಗ್(24) ಹಾಗೂ ಸ್ಯಾಮ್ಸನ್ ತಂಡವನ್ನು ಆಧರಿಸಿದರು. ಬಿಲ್ಲಿಂಗ್ 24 ರನ್ ಗಳಿಸಿ ಇಮ್ರಾನ್ ತಾಹಿರ್‌ಗೆ ಕ್ಲೀನ್‌ಬೌಲ್ಡಾದರು.
ಆಗ ರಿಷಬ್ ಪಂತ್(31)ರೊಂದಿಗೆ ಕೈಜೋಡಿಸಿದ ಸ್ಯಾಮ್ಸನ್ 3ನೆ ವಿಕೆಟ್‌ಗೆ 53 ರನ್ ಸೇರಿಸಿ ತಂಡದ ಮೊತ್ತವನ್ನು 124 ರನ್‌ಗೆ ತಲುಪಿಸಿದರು. 22 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಬಾರಿಸಿದ್ದ ಪಂತ್ ಅವರು ಮಯಾಂಕ್ ಅಗರವಾಲ್‌ಗೆ ರನೌಟಾದರು.
ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಡೇರ್ ಡೆವಿಲ್ಸ್: 20 ಓವರ್‌ಗಳಲ್ಲಿ 205/4
(ಸ್ಯಾಮ್ಸನ್ 102, ರಿಷಬ್ ಪಂತ್ 31, ತಾಹಿರ್ 1-24)
ರೈಸಿಂಗ್ ಪುಣೆ ಸೂಪರ್‌ಜೈಂಟ್: 16.1 ಓವರ್‌ಗಳಲ್ಲಿ 108 ರನ್‌ಗೆ ಆಲೌಟ್
(ಮಾಯಾಂಕ್ 20, ಅಮಿತ್ ಮಿಶ್ರಾ 3-11, ಝಹೀರ್ ಖಾನ್ 3-20, ಕಮಿನ್ಸ್ 2-24)
ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್.







