ಅಝ್ಲನ್ ಶಾ ಕಪ್: ಭಾರತದ ಹಾಕಿ ತಂಡ ಪ್ರಕಟ
ಶ್ರೀಜೇಶ್ ನಾಯಕ, ಮುಂಬೈ ಕನ್ನಡಿಗ ಸೂರಜ್‌ಗೆ ಸ್ಥಾನ

ಬೆಂಗಳೂರು, ಎ.11: ಮಲೇಷ್ಯಾದಲ್ಲಿ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಅಝ್ಲಾನ್ ಶಾ ಹಾಕಿ ಟೂರ್ನಮೆಂಟ್‌ಗೆ ಸ್ಟಾರ್ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ನಾಯಕತ್ವದ 18 ಸದಸ್ಯರ ಭಾರತೀಯ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ಮುಂಬೈ ಕನ್ನಡಿಗ ಸೂರಜ್ ಕರ್ಕೇರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮಲೇಷ್ಯಾದ ಇಪೋದಲ್ಲಿ ಎ.29 ರಿಂದ ಟೂರ್ನಿಯು ಆರಂಭವಾಗಲಿದೆ.
ಜೂನಿಯರ್ ವಿಶ್ವಕಪ್ ವಿಜೇತ ತಂಡದ ಸದಸ್ಯ ಮನ್‌ಪ್ರೀತ್ ಸಿಂಗ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಕಿರಿಯರ ವಿಶ್ವಕಪ್ ವಿಜೇತ ತಂಡದ ಇತರ ಸದಸ್ಯರಾದ ಡಿಫೆಂಡರ್ ಗುರಿಂದರ್ ಸಿಂಗ್, ಮಿಡ್‌ಫೀಲ್ಡರ್‌ಗಳಾದ ಸುಮಿತ್, ಮನ್‌ಪ್ರೀತ್, ಜೂನಿಯರ್ ವಿಶ್ವಕಪ್ ವಿಜೇತ ತಂಡದ ನಾಯಕ ಹರ್ಜೀತ್ ಸಿಂಗ್ ಹಾಗೂ ಫಾರ್ವರ್ಡ್ ಆಟಗಾರ ಮನ್‌ದೀಪ್ ಸಿಂಗ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
2016ರ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಜೂನಿಯರ್ ತಂಡದ ಆಟಗಾರ, ರಶ್ಯದಲ್ಲಿ ನಡೆದಿದ್ದ ಯುರೋ ಏಷ್ಯಾಕಪ್ ಹಾಗೂ ಕಳೆದ ವರ್ಷ ನಡೆದ ನಾಲ್ಕು ದೇಶಗಳ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ಮುಂಬೈನ 21ರ ಹರೆಯದ ಗೋಲ್‌ಕೀಪರ್, ಮುಂಬೈ ಕನ್ನಡಿಗ ಸೂರಜ್ ಕರ್ಕೇರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹಿರಿಯ ಆಟಗಾರರಿಗೆ ನಡೆಸಲಾಗಿದ್ದ ರಾಷ್ಟ್ರೀಯ ಶಿಬಿರದಲ್ಲಿ ಮುಖ್ಯ ಕೋಚ್ ರೊಲ್ಯಾಂಟ್ ಒಲ್ಟಮನ್ಸ್ ಅವರು 2018ರ ವಿಶ್ವಕಪ್ ಹಾಗೂ 2020ರ ಟೋಕಿಯೊ ಒಲಿಂಪಿಕ್ಸ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಕಿರಿಯ ಹಾಕಿ ಆಟಗಾರರಿಗೆ ಅವಕಾಶ ನೀಡುವ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. ಮೊದಲ ಹೆಜ್ಜೆಯಾಗಿ ಜೂನಿಯರ್ ಪುರುಷ ತಂಡದ ಹೆಚ್ಚಿನ ಆಟಗಾರರನ್ನು ಹಿರಿಯರ ತಂಡಕ್ಕೆ ಸೇರಿಸಿಕೊಂಡಿದ್ದಾರೆ.
‘‘ಈವರ್ಷ ಮೂರು ಮುಖ್ಯ ಟೂರ್ನಿಗಳಾದ ವರ್ಲ್ಡ್ ಲೀಗ್ ಸೆಮಿಫೈನಲ್, ಏಷ್ಯಾಕಪ್ ಹಾಗೂ ಒಡಿಶಾ ಪುರುಷರ ಹಾಕಿ ಲೀಗ್ ಫೈನಲ್ ನಡೆಯುತ್ತಿರುವ ಕಾರಣ ಹೊಸ ಆಟಗಾರರನ್ನು ಕಣಕ್ಕಿಳಿಸಲು ಯೋಜನೆ ಹಾಕಿಕೊಂಡಿದ್ದೇವೆ’’ಎಂದು ಭಾರತದ ಕೋಚ್ ಒಲ್ಟಮನ್ಸ್ ಹೇಳಿದ್ದಾರೆ.
ಮಲೇಷ್ಯಾದಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರ ಸಮ್ಮಿಶ್ರಣವಿದೆ. ಕೆಲವು ಕಿರಿಯ ಆಟಗಾರರು ಈ ಮೊದಲು ಹಿರಿಯರ ತಂಡದಲ್ಲಿ ಆಡಿದ್ದಾರೆ. ಆಸ್ಟ್ರೇಲಿಯ, ಬ್ರಿಟನ್ ಹಾಗೂ ನ್ಯೂಝಿಲೆಂಡ್ ತಂಡಗಳಿಗೆ ಹೋಲಿಸಿದರೆ ನಮ್ಮದು ಹೊಸ ತಂಡವಾಗಿದೆ’’ ಎಂದು ಭಾರತದ ಕೋಚ್ ತಿಳಿಸಿದ್ದಾರೆ.
ಹಾಕಿ ತಂಡ
ಗೋಲ್‌ಕೀಪರ್‌ಗಳು: ಪಿ.ಆರ್.ಶ್ರೀಜೇಶ್(ನಾಯಕ), ಸೂರಜ್ ಕರ್ಕೇರ.
ಡಿಫೆಂಡರ್‌ಗಳು: ಪ್ರದೀಪ್ ಮೋರ್, ಸುರೇಂದ್ರ ಕುಮಾರ್, ರೂಪಿಂದರ್ ಪಾಲ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಗುರಿಂದರ್ ಸಿಂಗ್.
ಮಿಡ್ ಫೀಲ್ಡರ್‌ಗಳು: ಚಿಂಗ್ಲೆಸನಾ ಸಿಂಗ್, ಸುಮಿತ್, ಸರ್ದಾರ್ ಸಿಂಗ್, ಮನ್‌ಪ್ರೀತ್ ಸಿಂಗ್(ಉಪನಾಯಕ),ಹರ್ಜೀತ್ ಸಿಂಗ್, ಮನ್‌ಪ್ರೀತ್.
ಫಾರ್ವರ್ಡ್‌ಗಳು: ಎಸ್.ವಿ. ಸುನೀಲ್, ತಲ್ವಿಂದರ್ ಸಿಂಗ್, ಮನ್‌ದೀಪ್ ಸಿಂಗ್, ಅಫ್ಫಾನ್ ಯೂಸುಫ್, ಆಕಾಶ್‌ದೀಪ್ ಸಿಂಗ್.







