ಪೋಲಿಯನ್ನು ಬೆಂಬಲಿಸಿದ ಪೊಲೀಸ್‌ನಿಂದ ಸಂತ್ರಸ್ತ ಬಾಲಕಿಯ ಅವಹೇಳನ

ಜೈಪುರ, ಎ.12: ಬಾಲಕಿಯೊಬ್ಬಳ ಭಾವಚಿತ್ರವನ್ನು ನಗ್ನಚಿತ್ರವಾಗಿ ಮಾರ್ಪಡಿಸಿ (ಮಾರ್ಫ್) ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಆಗಂತುಕನೊಬ್ಬ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದ್ದು, ರಾಜಸ್ಥಾನದ ಪೊಲೀಸ್ ಅಧಿಕಾರಿಯೊಬ್ಬರು ಈ ಸಂತ್ರಸ್ತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಬಾಲಕಿಯನ್ನು ಅವಹೇಳನ ಮಾಡಿದ್ದಲ್ಲದೇ, ಸಾಮಾಜಿಕ ಜಾಲತಾಣ ಖಾತೆಯನ್ನು ರದ್ದು ಮಾಡುವಂತೆಯೂ ಸಲಹೆ ಮಾಡಿದ್ದಾರೆ ಎಂದು ಬಾಲಕಿಯ ಕುಟುಂಬದವರು ದೂರಿದ್ದಾರೆ. "ಹೆಣ್ಣುಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ನೀಡಿದ್ದರ ಪರಿಣಾಮ ಇದು" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಲ್ಲದೇ, ಬಾಲಕಿಗೆ ಮೊಬೈಲ್ ಫೋನ್ ತೆಗೆದುಕೊಡುವ ಮೂಲಕ ಪೋಷಕರ ತಪ್ಪೂ ಇದೆ ಎಂದು ಹೇಳಿದ್ದಾಗಿ ಸಂತ್ರಸ್ತೆ ಬಾಲಕಿಯ ಅಕ್ಕ ಸಲೇಹ ಪಾಟ್ವಾಲ ದೂರಿದ್ದಾರೆ.
ಸಲೇಹ ಅವರ ಫೇಸ್‌ಬುಕ್ ಪೋಸ್ಟ್ ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೇನಕಾ ಗಾಂಧಿ ಅವರೂ ಬೆಂಬಲಿಸಿದ್ದಾರೆ. "ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ" ಎಂದು ಅವರು ಟ್ವಿಟ್ಟರ್‌ನಲ್ಲಿ ಆಗ್ರಹಿಸಿದ್ದಾರೆ. ಘಟನೆಯನ್ನು ಲಘುವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 2000ದಿಂದ ಜಾರಿಯಲ್ಲಿರುವ ಸೈಬರ್ ಅಪರಾಧ ತಡೆ ಕಾಯ್ದೆ ಅನ್ವಯ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಸಂತ್ರಸ್ತ ಬಾಲಕಿಯ ಭಾವಚಿತ್ರದ ಮುಖವನ್ನು ಇನ್ನೊಂದು ನಗ್ನಚಿತ್ರಕ್ಕೆ ಮಾರ್ಫ್ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವುದಾಗಿ ಆಗಂತುಕ ಬೆದರಿಕೆ ಹಾಕಿದ್ದ. ಈ ವಿಷಯವನ್ನು ಪಾಲಕರ ಬಳಿ ಹೇಳಿಕೊಂಡಾಗ ಉದಯಪುರದ ಧನಮಂಡಿ ಠಾಣೆಗೆ ದೂರು ನೀಡಲು ತೆರಳಿದ್ದರು. ಇಂಥ ದೂರನ್ನು ಸೈಬರ್ ಠಾಣೆ ದಾಖಲಿಸಿಕೊಳ್ಳಬೇಕು ಎಂದು ಪೊಲೀಸರು ಸೂಚಿಸಿದರು ಎನ್ನಲಾಗಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಚಿತ್ರವನ್ನು ಏಕೆ ಹಾಕಬೇಕು? ಬೋಹ್ರಾ ಜಾತಿಯವರು ಹೆಣ್ಣುಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದರ ಫಲ ಇದು ಎಂದು ರಾಜೇಶ್ ಶರ್ಮಾ ಎಂಬ ಅಧಿಕಾರಿ, ದೂರು ನೀಡಲು ಬಂದವರಿಗೇ ಬುದ್ಧಿ ಹೇಳಿದ್ದಾಗಿ ಆಪಾದಿಸಲಾಗಿದೆ.







