ಮಣ್ಣುಕುಸಿದು ಕೊಳವೆಬಾವಿಯೊಳಕ್ಕೆ ಬಿದ್ದ ಕಾರ್ಮಿಕರು

ರೋಣ, ಎ.12: ಕೊಳವೆ ಬಾವಿಯ ಕೇಸಿಂಗ್ ಪೈಪು ತೆಗೆದು ರೀ ಬೋರ್ ಮಾಡಿಸಲು ಸಿದ್ದತೆ ನಡೆಸುತ್ತಿದ್ದಾಗ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಕೊಳವೆ ಬಾವಿಯೊಳಕ್ಕೆ ಬಿದ್ದ ಘಟನೆ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ನಡೆದಿದೆ.
ಸವಡಿ ಗ್ರಾಮದ ಕಾರ್ಮಿಕರಾದ ಮೇಸ್ತ್ರಿ ಬಸವರಾಜ್ ಮತ್ತು ಮಾಲಕರಾದ ಶಂಕರಪ್ಪ ಕೊಳವೆ ಬಾವಿಯೊಳಗೆ ಸಿಲುಕಿಕೊಂಡಿದ್ದಾರೆ. ಮೂರು ದಿನಗಳಿಂದ ರೀಬೋರ್ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಇಂದು ಬೆಳಗ್ಗೆ ಕಾಮಗಾರಿಯ ಪರಿಶೀಲನೆಗೆ ಮೇಸ್ತ್ರಿ ಬಸವರಾಜ್ ಮತ್ತು ಜಾಗದ ಮಾಲಕ ಶಂಕರಪ್ಪ ತೆರಳಿದ್ದಾಗ ಮಣ್ಣು ಕುಸಿದು ಇಬ್ಬರು ಕೊಳವೆ ಬಾವಿಯೊಳಗೆ ಸಿಲುಕಿಕೊಂಡಿದ್ದಾರೆ.
ಸುಮಾರು ನಲುವತ್ತು ಅಡಿ ಆಳದಲ್ಲಿ ಸಿಲುಕಿಕೊಂಡಿರುವ ಇಬ್ಬರನ್ನು ಹೊರತೆಗೆಯಲು ಅಗ್ನಿಶಾಮಕ ದಳ, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶಂಕರಪ್ಪ ಜಮೀನಿನಲ್ಲಿರುವ ಸುಮಾರು ಇನ್ನೂರು ಅಡಿ ಆಳದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದ್ದು, ರೀಬೋರ್ ಮಾಡಿಸಲು ಕೇಸಿಂಗ್ ಪೈಪ್ ತೆಗೆದು ತಯಾರಿಯಲ್ಲಿದ್ದಾಗ ದಿಢೀರನೆ ಮಣ್ಣು ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.





