ಶಂಕಿತ ಭಯೋತ್ಪಾದನಾ ಚಟುವಟಿಕೆ: ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಂಗಳೂರು, ಎ. 12: ಶಂಕಿತ ಭಯೋತ್ಪಾದನೆ ಚಟುವಟಿಕೆ ಆರೋಪದಲ್ಲಿ 2008ರಲ್ಲಿ ಬಂಧಿಸಲ್ಪಟ್ಟಿದ್ದ ಮೂವರು ಆರೋಪಿಗಳನ್ನು ಬುಧವಾರ ನಗರದ ಮೂರನೆ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಲಾಗಿದ್ದು, ನ್ಯಾಯಾಧೀಶರು ಮೂವರಿಗೂ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸುಭಾಶ್‌ನಗರದ ಸೈಯದ್ ಮುಹಮ್ಮದ್ ನೌಶಾದ್, ಹಳೆಯಂಗಡಿಯ ಮುಹಮ್ಮದ್ ಬಾವ ಅಬೂಬಕರ್ ಹಾಗೂ ಉಚ್ಚಿಲದ ಫಕೀರ್ ಅಹ್ಮದ್ ಕಠಿಣ ಜೀವಾವಧಿ ಶಿಕ್ಷೆಗೊಳಗಾದವರು.
ಅಕ್ರಮ ಚಟುವಟಿಕೆ ಕಾಯ್ದೆಯ ಕಲಂ 16(1)(ಬಿ) ಕಠಿಣ ಜೀವಾವಧಿ ಸೆರೆವಾಸ, 10 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ 1 ವರ್ಷ ಕಠಿಣ ಸಜೆ. ಕಲಂ 17ರ ಅನ್ವಯ ದುಷ್ಕೃತ್ಯ ಸಂಚು ಆರೋಪ ಹಾಗೂ ಕಲಂ 18ರ ಅನ್ವಯ ಸ್ಫೋಟ ಯತ್ನ, ಕುಮ್ಮಕ್ಕು ನೀಡಿದ ಆರೋಪದಲ್ಲಿ ತಲಾ 5 ವರ್ಷ ಕಠಿಣ ಸಜೆ, 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳು ಕಠಿಣ ಶಿಕ್ಷೆ. ಸ್ಫೋಟಕ ವಸ್ತುಗಳ ಕಾಯ್ದೆ ಕಲಂ 5 (ಬಿ)ಯಡಿ ಕಠಿಣ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ, ದಂಡ ತರಲು ತಪ್ಪಿದಲ್ಲಿ 1 ವರ್ಷ ಕಠಿಣ ಸಜೆ, ಕಲಂ 9ಬಿ (ಬಿ) ಅಡಿ 2 ವರ್ಷ ಕಠಿಣ ಸಜೆ, 3 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 3 ತಿಂಗಳು ಕಠಿಣ ಸಜೆಯನ್ನು ಪ್ರಕಟಿಸಲಾಗಿದೆ. ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಐಪಿಸಿ ಕಾಯ್ದೆ ಕ್ರಿಮಿನಲ್ ಒಳಸಂಚು ಹಾಗೂ 25 (1ಎಎ) ಶಸ್ತ್ರಾಸ್ತ್ರ ಕಾಯ್ದೆಯಲ್ಲಿ ಕಠಿಣ ಜೀವಾವಧಿ ಶಿಕ್ಷೆ, ತಲಾ 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಕಠಿಣ ಸಜೆ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಎ.10ರಂದೇ ಆರೋಪಿಗಳನ್ನು ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಬುಧವಾರಕ್ಕೆ ಕಾಯ್ದಿರಿಸಿತ್ತು.





