ಪುಣೆಯಲ್ಲಿ ಗೂಂಡಾರಾಜ್: ಕಾರ್ಪೊರೇಟರ್ ಗಳ ಅದಕ್ಷತೆ ಪ್ರಶ್ನಿಸಿದ ಆರ್ ಟಿಐ ಕಾರ್ಯಕರ್ತನ ಬರ್ಬರ ಹತ್ಯೆ

ಪುಣೆ, ಎ.12: ಪಿಂಪ್ರಿ-ಚಿಂಚ್ವಾಡ್ ಇಲ್ಲಿನ ಖರಲ್ವಾಡಿ ಪ್ರದೇಶದ ಇಬ್ಬರು ಕಾಂಗ್ರೆಸ್ ಕಾರ್ಪೊರೇಟರ್ ಗಳ ಅದಕ್ಷತೆ ಪ್ರಶ್ನಿಸಿದ್ದ ಆರ್ ಟಿ ಐ ಕಾರ್ಯಕರ್ತ ಸುಹಾಸ್ ಹಲ್ದಂಖರ್ ಅವರನ್ನು 11 ಮಂದಿಯ ತಂಡ ಬರ್ಬರವಾಗಿ ಕೊಲೆ ಮಾಡಿದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ದಾಳಿಕೋರರಲ್ಲಿ ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಒಬ್ಬರೂ ಸೇರಿದ್ದಾರೆಂದು ಆರೋಪಿಸಲಾಗಿದೆ. ಆರೋಪಿಗಳೆಲ್ಲರನ್ನೂ ಬಂಧಿಸಲಾಗಿದ್ದು ಸ್ಥಳೀಯ ನ್ಯಾಯಾಲಯ ಅವರನ್ನು ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಿದೆ.
ಕೊಲೆಯನ್ನು ಖಂಡಿಸಿ ಸ್ಥಳೀಯರು ಮೌನ ಮೆರವಣಿಗೆಯೊಂದನ್ನು ನಡೆಸಿದ್ದು, ಪ್ರದೇಶದಲ್ಲಿ ಗೂಂಡಾ ರಾಜ್ ಅಂತ್ಯಗೊಳಿಸುವಂತೆ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ.
ಪೊಲೀಸರ ಪ್ರಕಾರ ರವಿವಾರ ರಾತ್ರಿ ಸುಹಾಸ್ ಅವರು ತಮ್ಮ ಬೈಕಿನಲ್ಲಿ ಮನೆಯತ್ತ ಸಾಗುತ್ತಿದ್ದಾಗ ಅವರನ್ನು ಖಾರಲ್ವಾಡಿಯ ಚೌಕ್ ಎಂಬಲ್ಲಿ ಇಬ್ಬರು ತಡೆದು ಮೂಲಸೌಲಭ್ಯಗಳ ಕೊರತೆ ಬಗ್ಗೆ ಅವರು ಅಳವಡಿಸಿದ ಬೋರ್ಡ್ ಒಂದರ ವಿಚಾರದಲ್ಲಿ ಅವರನ್ನು ವ್ಯಂಗ್ಯವಾಡಿದ್ದರು. ಇದರಿಂದ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಸುಹಾಸ್ ರತ್ತ ಕಾಂಕ್ರೀಟ್ ಬ್ಲಾಕ್ ಗಳನ್ನು ಎಸೆದಿದ್ದರು. ತಲೆಗೆ ಗಂಭೀರವಾಗಿ ಗಾಯಗೊಂಡ ಸುಹಾಸ್ ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದರು.
ಬಂಧಿತ ಮಾಜಿ ಕಾರ್ಪೊರೇಟರ್ ನನ್ನು ಸದ್ಗುರು ಮಹದೇವ್ ಕದಂ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲೊಬ್ಬ ಕಲ್ಯ ಅಲಿಯಾಸ್ ಸಂದೀಪ್ ಕಲಪುರೆ ಸ್ಥಳೀಯ ಮುನಿಸಿಪಾಲಿಟಿ ನಡೆಸುತ್ತಿದ್ದ ಮಕ್ಕಳ ಕೇಂದ್ರವೊಂದರ ವಾಚ್ ಮ್ಯಾನ್ ಆಗಿದ್ದು ಯಾವತ್ತೂ ಕರ್ತವ್ಯಕ್ಕೆ ಹಾಜರಾಗದ ಆತನ ವಿರುದ್ಧ ಸುಹಾಸ್ ದೂರು ನೀಡಿದ್ದರಿಂದ ಆತ ಕೆಲಸ ಕಳದುಕೊಂಡಿದ್ದ ಎಂದು ತಿಳಿದು ಬಂದಿದೆ.







