ಏಡ್ಸ್ ಪೀಡಿತರೊಂದಿಗೆ ತಾರತಮ್ಯ ಮಾಡುವುದು ಇನ್ನುಮುಂದೆ ಕ್ರಿಮಿನಲ್ ಕೃತ್ಯ

ಹೊಸದಿಲ್ಲಿ, ಎ. 12: ಏಡ್ಸ್ ಪೀಡಿತರೊಂದಿಗೆ ಭೇದಭಾವದಿಂದ ವರ್ತಿಸಿದರೆ ಅಪರಾಧವಾಗುವ ಕಾನೂನು ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಎಚ್‌ಐವಿ-ಏಡ್ಸ್ (ನಿಯಂತ್ರಣ) ಮಸೂದೆ 2017 ಪ್ರಕಾರ ಏಡ್ಸ್ ಪೀಡಿತರ ವಿರುದ್ಧ ಯಾವುದೇ ರೀತಿಯ ಭೇದಭಾವ ತೋರಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಶಾಲೆ, ಕಾಲೇಜು ಪ್ರವೇಶದ ವೇಳೆ, ಕೆಲಸದವಿಷಯದಲ್ಲಿ ಏಡ್ಸ್‌ಪೀಡಿತರೊಡನೆ ತಾರತಮ್ಯ ಎಸಗುವಂತಿಲ್ಲ. ಎಲ್ಲರಂತೆಅವರನ್ನು ಪರಿಗಣಿಸಬೇಕಾಗಿದೆ. ಎಚ್‌ಐವಿ ರೋಗಿಗಳು ಚಿಕಿತ್ಸೆಗಾಗಿ ಬಂದರೆ ಅವರನ್ನು ದೂರವಿಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಮಾತ್ರವಲ್ಲ, ಎಚ್‌ಐವಿ ಪರೀಕ್ಷೆ ನಡೆಸಲು ಯಾರನ್ನೂ ಒತ್ತಾಯಿಸುವಂತಿಲ್ಲ. ಸಂಬಂಧಿಸಿದ ವ್ಯಕ್ತಿಗಳ ಅನುಮತಿ ಇದ್ದರೆ ಅಥವಾ ಕೋರ್ಟಿನ ಆದೇಶವಿಲ್ಲದೆ ಎಚ್‌ಐವಿ ಪರೀಕ್ಷೆಯ ಫಲಿತಾಂಶವನ್ನು ಬಹಿರಂಗಗೊಳಿಸುವಂತಿಲ್ಲ. ತಾರತಮ್ಯಕ್ಕೊಳಗಾಗುತ್ತಿದ್ದರೆ ಎಚ್‌ಐವಿ ಪೀಡಿತರು ದೂರು ನೀಡಬಹುದು. ಇತ್ಯಾದಿ ಮಸೂದೆಯ ವಿವರಗಳನ್ನು ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಲೋಕಸಭೆಯಲ್ಲಿ ವಿವರಿಸಿದ್ದಾರೆ.
ಭಾರತದಲ್ಲಿ ಎಚ್‌ಐವಿಪೀಡಿತರ ಸಂಖ್ಯೆ ಶೇ. 67ರಷ್ಟು ಕಡಿಮೆಯಾಗಿದೆ. ಈ ಹಿಂದೆ 2.5 ಲಕ್ಷ ಏಡ್ಸ್ ಪೀಡಿತರಿದ್ದರು. ಈಗ ಅವರ ಸಂಖ್ಯೆ 85,000ಕ್ಕೆ ಇಳಿಕೆಯಾಗಿದೆ. ಏಡ್ಸ್ ಪೀಡಿತರ ಸಾವಿನ ಸಂಖ್ಯೆ ಶೇ. 54ರಷ್ಟು ಕಡಿಮೆಯಾಗಿದೆ ಮತ್ತು ಕೇಂದ್ರಸರಕಾರದ ಜನಜಾಗೃತಿ ಕಾರ್ಯಕ್ರಮ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸಚಿವರು ತಿಳಿಸಿದರು.







