ನೀರಿನ ಸಮಸ್ಯೆ: ಮನಪಾ ವಿರುದ್ಧ ಬಿಜೆಪಿ ಧರಣಿ

ಮಂಗಳೂರು, ಎ.12: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಮನಪಾ ಆಡಳಿತ ವಿಫಲಗೊಂಡಿದೆ ಎಂದು ಆರೋಪಿಸಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ವಲಯ ಬಿಜೆಪಿ ಸಮಿತಿ ವತಿಯಿಂದ ಬುಧವಾರ ಮನಪಾ ಮುಂದೆ ಧರಣಿ ನಡೆಯಿತು.
ಕಳೆದ ಬುಧವಾರ ಸುರತ್ಕಲ್ ಜಂಕ್ಷನ್‌ನಲ್ಲಿ ಧರಣಿಗೆ ಚಾಲನೆ ನೀಡಿದ್ದ ಬಿಜೆಪಿಯು ಬಳಿಕ ಕಾವೂರು ಜಂಕ್ಷನ್, ನಗರದ ಆರ್‌ಟಿಒ, ಕದ್ರಿ ಮಲ್ಲಿಕಟ್ಟೆ ಜಂಕ್ಷನ್‌ನಲ್ಲಿ ಧರಣಿ ನಡೆಸಿ ಗಮನ ಸೆಳೆದಿತ್ತು. ತುಂಬೆ ವೆಂಟೆಡ್ ಡ್ಯಾಂನಲ್ಲಿ ಸಾಕಷ್ಟು ನೀರಿದ್ದರೂ ಕೂಡ ಮೇಯರ್ ಕವಿತಾ ಸನಿಲ್ ಮಂಗಳೂರು ಮಹಾನಗರಕ್ಕೆ ನೀರು ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದರು.
ಧರಣಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಯೋಗೀಶ್ ಭಟ್, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಮುಖಂಡರಾದ ವೇದವ್ಯಾಸ್ ಕಾಮತ್, ಭಾಸ್ಕರಚಂದ್ರ ಶೆಟ್ಟಿ, ಸತ್ಯಜಿತ್ ಸುರತ್ಕಲ್ ಮತ್ತಿತರರು ಪಾಲ್ಗೊಂಡಿದ್ದರು.
Next Story





