ಪಿಲಿಕುಳ ನಿಸರ್ಗಧಾಮದಲ್ಲಿಲ್ಲ ನೀರಿನ ಸಮಸ್ಯೆ: 1000ಕ್ಕೂ ಅಧಿಕ ಪ್ರಾಣಿ-ಪಕ್ಷಿಗಳಿಗೂ ಸಾಕಾಗುವಷ್ಟು ನೀರಿದೆ

ಮಂಗಳೂರು, ಎ.12: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳು ಬರಪೀಡಿತವೆಂದು ಘೋಷಿಸಲ್ಪಟ್ಟಿದ್ದರೂ, ಮಂಗಳೂರು ನಗರದ ಹೊರವಲಯದ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನೀರಿಗೆ ಬರವಿಲ್ಲ. ಇಲ್ಲಿರುವ 1,000ಕ್ಕೂ ಅಧಿಕ ಜೀವಸಂಕುಲಗಳಿಗೆ ಅಗತ್ಯವಾದಷ್ಟು ನೀರು ಲಭ್ಯವಿದೆ. ''ಪಿಲಿಕುಳ ನಿಸರ್ಗಧಾಮದ ಪ್ರಾಣಿ ಪಕ್ಷಿಗಳಿಗೆ ಅಗತ್ಯವಾದ ನೀರು ಗುರುಪುರ ನದಿಯಿಂದ ಸರಬರಾಜಾಗುತ್ತದೆ. ಮೃಗಾಲಯದಲ್ಲಿ ಅಲ್ಲಲ್ಲಿ ಕೊಳಗಳ ವ್ಯವಸ್ಥೆ ಇದ್ದು, ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಇದೆ. ಬಿಸಿಲ ತಾಪವನ್ನು ತಣಿಸಲು ಪ್ರಾಣಿಗಳಿಗೆ ನೀರನ್ನು ಚಿಮುಕಿಸುವ ವ್ಯವಸ್ಥೆಯೂ ಇದೆ'' ಎಂದು ಡಾ. ಶಿವರಾಮ ಕಾರಂತ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ. ಪ್ರಸನ್ನ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.
ಬಿಸಿಲ ತಾಪಮಾನದಿಂದ ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆಯೂ ಜಾಗರೂಕತೆ ವಹಿಸಲಾಗುತ್ತದೆ. ಪ್ರತಿದಿನ ಪಶು ವೈದ್ಯರು ಭೇಟಿ ನೀಡಿ ಪ್ರಾಣಿಗಳ ತಪಾಸಣೆ ನಡೆಸುತ್ತಾರೆ. ಆಹಾರದ ಬಗ್ಗೆಯೂ ಸೂಕ್ತ ಕಾಳಜಿ ವಹಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.
ಮನಪಾ ತ್ಯಾಜ್ಯ ನೀರು ಸಂಸ್ಕರಿಸಿ ಮರ-ಗಿಡಗಳಿಗೆ ಬಳಕೆ
ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ನೀರು ನಿಸರ್ಗಧಾಮಕ್ಕೆ ಸರಬರಾಜಾಗುತ್ತದೆ. ಅದನ್ನು ಸಂಸ್ಕರಿಸುವ ವ್ಯವಸ್ಥೆಯೂ ಇದೆ. ಸಂಸ್ಕರಿಸಲ್ಪಟ್ಟ ಸುಮಾರು 1.5 ಲಕ್ಷ ಲೀಟರ್ ನೀರನ್ನು ಇಲ್ಲಿನ ಮರ ಗಿಡಗಳು, ಉದ್ಯಾನವನ, ಟ್ರೀ ಪಾರ್ಕ್, ಹುಲ್ಲು ಹಾಸು, ಪ್ರಾದೇಶಿಕ ವಿಜ್ಞಾನ ಕೇಂದ್ರದ ಸುತ್ತ ಮುತ್ತಲಿನ ಗಿಡಮರಗಳಿಗೆ ಒದಗಿಸಲಾಗುತ್ತದೆ. ಹಾಗಾಗಿ ನಿಸರ್ಗಧಾಮದಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ ಎಂದು ಪ್ರಸನ್ನ ವಿವರ ನೀಡುತ್ತಾರೆ.
ಗುರುಪುರ ನದಿ ದಂಡೆಯಲ್ಲಿರುವ 400 ಎಕರೆ ಪ್ರದೇಶವಾದ ಪಿಲಿಕುಳದಲ್ಲಿ ಸುಮಾರು 150 ಎಕರೆ ಪ್ರದೇಶವು ಉದ್ಯಾನವದಿಂದ ಕೂಡಿದೆ. ಉದ್ಯಾನವನದ ಮೃಗಾಲಯದಲ್ಲಿ 120 ವಿವಿಧ ಪ್ರಬೇಧಗಳ 1000ಕ್ಕೂ ಅಧಿಕ ಪ್ರಾಣಿಪಕ್ಷಿಗಳಿವೆ. ಇದೀಗ ವಿಶೇಷ ಆಕರ್ಷಣೆಯಾಗಿ ಎರಡು ನೀರಾನೆಗಳಿದ್ದು, ಮತ್ತಷ್ಟು ಹೊಸ ಪ್ರಾಣಿಗಳ ಸೇರ್ಪಡೆಯಾಗಲಿದೆ. ನಿಸರ್ಗಧಾಮಗಳ ನಡುವಿನ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಪಿಲಿಕುಳ ಮೃಗಾಲಯದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಚಿರತೆ, ಕಾಳಿಂಗ ಸರ್ಪಗಳಲ್ಲಿ ಕೆಲವನ್ನು ರಾಜ್ಯದ ಬೇರೆ ಮೃಗಾಲಯಗಳಿಗೆ ರವಾನಿಸಿ, ಬೇರೆ ಮೃಗಾಲಯಗಳಿಂದ ಹೊಸ ಪ್ರಾಣಿಗಳನ್ನು ಪಿಲಿಕುಳಕ್ಕೆ ತರುವ ಕಾರ್ಯಕ್ರಮವೂ ಪ್ರಸ್ತುತ ಜಾರಿಯಲ್ಲಿದೆ ಎಂದವರು ಮಾಹಿತಿ ನೀಡಿದ್ದಾರೆ.







