3 ವರ್ಷದ ಬಾಲಕನ ಹತ್ಯೆ ಪ್ರಕರಣ: ಮಠದ ಪರಿಚಾರಕನೇ ಹಂತಕ

ಶಿವಮೊಗ್ಗ, ಎ. 12: ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ತಂಗಿದ್ದ 3 ವರ್ಷದ ಬಾಲಕನ ಅಪಹರಣ ನಡೆಸಿ ಹತ್ಯೆ ಮಾಡಿದ್ದ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಬಾಲಕನ ಹತ್ಯೆ ನಡೆಸಿದ ಆರೋಪದ ಮೇರೆಗೆ ಆಶ್ರಮದ ಪರಿಚಾರಕನನ್ನು ಬಂಧಿಸಿದ್ದಾರೆ.
ರುದ್ರೇಶ್ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆಶ್ರಮದ ಸಮೀಪವೇ ಆರೋಪಿಯನ್ನು ಹೊಸನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥಗೌಡ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಮಹಾರಾಷ್ಟ್ರದ ಪುಣೆಯ ಗಂಧರ್ವನಗರದ ನಿವಾಸಿ ಖಾಸಗಿ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕುಮಾರಸ್ವಾಮಿ ಹಾಗೂ ಶಿರಸಿ ಸಮೀಪದ ಸಿದ್ದಾಪುರದ ನಿವಾಸಿ ಚೈತ್ರಾ ಎಂಬ ದಂಪತಿಯ ಪುತ್ರ ಸುಜ್ (3) ಕೊಲೆಗೀಡಾದ ಬಾಲಕನಾಗಿದ್ದಾನೆ.
ಆರೋಪಿ ರುದ್ರೇಶ್ ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದು, ಕೆಲ ವರ್ಷಗಳಿಂದ ಸದಾನಂದ ಶಿವಯೋಗಾಶ್ರಮದಲ್ಲಿ ಪರಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಬಾಲಕನ ಕುಟುಂಬದ ಸದಸ್ಯರೊಂದಿಗಿದ್ದ ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಬಾಲಕನ ಹತ್ಯೆ ನಡೆಸಿದ್ದಾಗಿ ಆರೋಪಿಯು ಪೊಲೀಸರ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಘಟನೆ ಹಿನ್ನೆಲೆ: ಸದಾನಂದ ಶಿವಯೋಗಾಶ್ರಮದಲ್ಲಿ ಕಿರಿಯ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಏರ್ಪಡಿಸಲಾಗಿತ್ತು. ಮಠದ ಈ ಹಿಂದಿನ ಗುರುಗಳಾಗಿದ್ದ, ಕೆಲ ವರ್ಷಗಳ ಹಿಂದೆ ವಿಧಿವಶರಾಗಿದ್ದ ಚನ್ನಬಸವ ಸ್ವಾಮೀಜಿ ಹಾಗೂ ಈಗಿನ ಸಿದ್ದಲಿಂಗ ಸ್ವಾಮೀಜಿ ಚೈತ್ರಾರವರಿಗೆ ಸಂಬಂಧಿಗಳಾಗಿದ್ದರು. ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಚೈತ್ರಾ ತಮ್ಮ ಪುತ್ರನೊಂದಿಗೆ ಕಳೆದ ವಾರ ಮಠಕ್ಕೆ ಆಗಮಿಸಿ ತಂಗಿದ್ದರು. ಕಳೆದ ಸೋಮವಾರ ರಾತ್ರಿ ಚೈತ್ರಾ ಪಕ್ಕದಲ್ಲಿ ಮಲಗಿದ್ದ ಬಾಲಕ ನಿಗೂಢವಾಗಿ ಕಣ್ಮರೆಯಾಗಿದ್ದ. ಬೆಳಗ್ಗೆ ಬಾಲಕ ನಾಪತ್ತೆಯಾಗಿರುವ ಸುದ್ದಿ ತಿಳಿದು ಎಲ್ಲೆಡೆ ಶೋಧ ನಡೆಸಿದ್ದು, ಈ ವೇಳೆ ಮಠಕ್ಕೆ ಸಮೀಪದ ನದಿಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಬಾಲಕನ ಕೊಲೆಯಾಗಿದ್ದು ಕಂಡುಬಂದಿತ್ತು.
ಈ ನಡುವೆ ಸೋಮವಾರ ರಾತ್ರಿ ಮಠದಲ್ಲಿ ಊಟ ಮಾಡಿದ್ದ ಚೈತ್ರಾ ಮತ್ತಿತರರ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದು ಪೊಲೀಸರ ತನಿಖೆಯ ವೇಳೆ ಪತ್ತೆಯಾಗಿತ್ತು. ಊಟ ಮಾಡಿದ್ದವರು ಗಾಢ ನಿದ್ರೆಗೆ ಶರಣಾಗಿದ್ದರು. ಬೆಳಗ್ಗೆ ಮಂಪರಿನಿಂದ ಮಲಗಿದ್ದವರು ಸ್ಥಳದಿಂದ ಏದ್ದೇಳಲಾಗದೆ ಒದ್ದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಚೈತ್ರಾ ಸೇರಿದಂತೆ ಉತ್ತರ ಕರ್ನಾಟಕ ಬಾಗದ ನಾಲ್ಕೈದು ಭಕ್ತಾಧಿಗಳನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಸಿಕ್ಕಿಬಿದ್ದ ಆರೋಪಿ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮಠದಲ್ಲಿ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದ ರುದ್ರೇಶ್ ಸೇರಿದಂತೆ ಇತರೆ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ರುದ್ರೇಶನು ತಾನೊಬ್ಬನೆ ಬಾಲಕನ ಹತ್ಯೆ ನಡೆಸಿದ್ದಾಗಿ ಬಾಯ್ಬಿಟ್ಟಿದ್ದ. ಚೈತ್ರಾ ಕುಟುಂಬದವರೊಂದಿಗಿದ್ದ ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ.
ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದ: ಬಾಲಕನ ಹತ್ಯೆಗೆ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಮಠದ ಪರಿಚಾರಕ ರುದ್ರೇಶ್ ಬಾಲಕನ ತಾಯಿ ಹಾಗೂ ಇತರರ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದ. ಈ ಊಟ ಸೇವಿಸಿದ್ದ ಚೈತ್ರಾ ಮತ್ತಿತರರು ಗಾಢ ನಿದ್ರೆಗೆ ಶರಣಾಗಿದ್ದರು. ಮಧ್ಯರಾತ್ರಿಯ ವೇಳೆ ಆರೋಪಿ ತಾಯಿಯ ಪಕ್ಕದಲ್ಲಿ ನಿದ್ರಿಸುತ್ತಿದ್ದ ಮಗುವನ್ನು ಹೊತ್ತೊಯ್ದು ಉಸಿರುಗಟ್ಟಿಸಿ ಸಾಯಿಸಿದ್ದ. ನಂತರ ಮಗುವನ್ನು ಮಠದ ಸಮೀಪವಿದ್ದ ನದಿಗೆ ಎಸೆದಿದ್ದ. ಏನೂ ಗೊತ್ತಿಲ್ಲದಂತೆ ಮಠದಲ್ಲಿಯೇ ಬೀಡುಬಿಟ್ಟಿದ್ದ. ಬೆಳಗ್ಗೆ ಮಗುವಿನ ಹುಡುಕಾಟದ ನಾಟಕ ಕೂಡ ನಡೆಸಿದ್ದ ವಿಷಯ ತಿಳಿದುಬಂದಿದೆ.







