ಬೈಕ್‌ಗೆ ಲಾರಿ ಢಿಕ್ಕಿ: ಯುವತಿ ಮೃತ್ಯು

ಮಂಗಳೂರು, ಎ.12: ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಯುವತಿಯೋರ್ವರು ಸಾವನ್ನಪ್ಪಿರುವ ಘಟನೆ ಕೆಪಿಟಿ ಬಳಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ಯುವತಿಯನ್ನು ಗುರುಪುರ ನಿವಾಸಿ ಖಮರುನ್ನಿಸಾ (26) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗುರುಪುರ ನಿವಾಸಿ ನೌಫಲ್ (28) ಎಂಬವರು ಗಾಯಗೊಂಡಿದ್ದಾರೆ.
ಬುಧವಾರ ಮಧ್ಯಾಹ್ನ ನೌಫಲ್ ಅವರು ಖಮರುನ್ನೀಸಾರನ್ನು ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿಕೊಂಡು ಕೆಪಿಟಿಯಿಂದ ಕದ್ರಿಯ ಕಡೆಗೆ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿಯೊಂದು ಕೆಪಿಟಿ ಬಳಿಯ ಹಳೆ ಪೆಂಟ್ರೋಲ್ ಪಂಪ್ ಬಳಿ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ನೌಫಲ್ ಮತ್ತು ಖಮರುನ್ನಿಸಾ ರಸ್ತೆಗೆ ಎಸೆಯಲ್ಪಟ್ಟಿದ್ದು, ಲಾರಿಯ ಚಕ್ರ ಖಮರುನ್ನಿಸಾರ ತಲೆಯ ಮೇಲೆ ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನೌಫಲ್ ವೃತ್ತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಾಫಿಕ್ ಪೊಲೀಸ್ ಕರ್ತವ್ಯ ನಿಭಾಯಿಸಿದ ಶಾಸಕರು: ಅಪಘಾತ ನಡೆದ ಸ್ಥಳದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಅವರು ಕೆಲವು ಸಮಯ ಟ್ರಾಫಿಕ್ ಪೊಲೀಸರಂತೆ ಕರ್ತವ್ಯ ನಿಭಾಯಿಸಿದರು. ರಸ್ತೆ ಅಪಘಾತದಿಂದ ಕೆಪಿಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಇದೇ ಸಂದರ್ಭದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಶಾಸಕರು ಸುರತ್ಕಲ್‌ನಿಂದ ಮಂಗಳೂರಿಗೆ ಆಗಮಿಸುತ್ತಿದ್ದರು. ಟ್ರಾಫಿಕ್ ಜಾಮ್ ಆಗಿರುವ ವಿಷಯವನ್ನರಿತ ಶಾಸಕರು ಕೂಡಲೇ ವಾಹನದಿಂದ ಕೆಳಗಿಳಿದು ವಾಹನ ದಟ್ಟನೆಯನ್ನು ನಿಭಾಯಿಸಲು ಸಹಕಾರ ನೀಡಿದರು.







