ಫೇಸ್‌ಬುಕ್ ಮೂಲಕ 8 ಕೋಟಿ ರೂ. ವಂಚನೆ: ಆರೋಪಿಗಳ ಬಂಧನ
ಬೆಂಗಳೂರು, ಎ.12: ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ 100ಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿ 8 ಕೋಟಿ ರೂ.ಗಳಿಗೂ ಹೆಚ್ಚಿನ ವಂಚನೆ ನಡೆಸಿದ್ದ ಮಹಿಳೆ ಹಾಗೂ ನೈಜೀರಿಯನ್ ಪ್ರಜೆಯೊಬ್ಬನನ್ನು ಬಂಧಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ನೈಜೀರಿಯಾದ ಇಕೆಜಾದ ಆಂಡ್ರೋ ಅಲಿಯಾಸ್ ಎರಿಕ್ ಪೀಟರ್ (41), ಮಹಾರಾಷ್ಟ್ರದ ರೋಡ್ ಈಸ್ಟ್‌ನ ಬಬ್ಲಿ ಫರ್ವೀನ್ ಹಾಶ್ಮೀ (52) ಎಂದು ಗುರುತಿಸಲಾಗಿದೆ.
ನವದೆಹಲಿಯ ಕಾಸ್‌ಪುರಿಯಲ್ಲಿ ನೆಲೆಸಿದ್ದ ಆಂಡ್ರೋ ಹಾಗೂ ಮುಂಬೈನಲ್ಲಿ ನೆಲೆಸಿದ್ದ ಬಬ್ಲಿ ಫರ್ವೀನ್ 4 ವರ್ಷಗಳಿಂದ ಫೇಸ್‌ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ನಡೆಸುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದರು. ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ ಜಯ ಎಂಬವರಿಂದ ಹಾವು ಕಡಿತ ಹಾಗೂ ಇನ್ನಿತರ ಕಾಯಿಲೆಯನ್ನು ಗುಣಪಡಿಸುವ ಆಂಜಲಿಕ ಹರ್ಬಲ್ ಸೀಡ್ಸ್ ಪ್ಯಾಕೆಟ್‌ಗಳನ್ನು ಖರೀದಿಸಿ ವ್ಯಾಪಾರ ಮಾಡುವಂತೆ ಆರೋಪಿಗಳು 50 ಲಕ್ಷ ರೂ.ಗಳನ್ನು ಪಡೆದುಕೊಂಡು ವಂಚಿಸಿದ್ದರು. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 80 ಲಕ್ಷ ರೂ.ಗಳನ್ನು ವ್ಯವಹಾರಕ್ಕಾಗಿ ಕೊಡುವುದಾಗಿ ಆಸೆ ಹುಟ್ಟಿಸಿ ಆರೋಪಿಗಳನ್ನು ಮುಂಬೈನಿಂದ ನಗರಕ್ಕೆ ಕರೆಸಿಕೊಂಡು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.