ಸುಪಾರಿ ನೀಡಿ ಪತಿಯನ್ನು ಕೊಲ್ಲಿಸಿದ ಪತ್ನಿ: ಐವರು ಆರೋಪಿಗಳ ಬಂಧನ

ಬೆಂಗಳೂರು,ಎ. 12: ಸಾಲ ಪಡೆದು ಹಣ ವಾಪಸ್ ನೀಡದ ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಲೇವಾದೇವಿಗಾರನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಪತ್ನಿ ಸೇರಿ 5 ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪುಲಕೇಶಿ ನಗರದ ಡೋರಿನ್ ಕುಮಾರ್, ಆಕೆಯ ಸ್ನೇಹಿತ ಶ್ರೀಧರ್, ಪೆರಿಯಾರ್ ನಗರದ ದಿನೇಶ್, ಪ್ಯಾಟ್ರಿಕ್, ಪ್ರಭುನನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಅವಿನಾಶ್‌ಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಎ.6 ರಂದು ಸಂಜೆ 4ರ ವೇಳೆ ಕಲ್ಪಳ್ಳಿ ಸ್ಮಶಾನದ ಬಳಿಯ ರೈಲ್ವೆ ಗೇಟ್ ಪಕ್ಕದಲ್ಲಿ ಲೇವಾದೇವಿಗಾರ ಕುಮಾರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ಪತ್ತೆಗಾಗಿ ಪೂರ್ವ ವಿಭಾಗದ ಪೊಲೀಸರ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ಕೈಗೊಂಡಾಗ ಕುಮಾರ್‌ನನ್ನು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ: ಕುಮಾರ್ ಹಲವು ವರ್ಷಗಳಿಂದ ಲೇವಾದೇವಿ ವ್ಯವಹಾರ ನಡೆಸುತ್ತಿದ್ದು, ಈತನಿಂದ ಬಹಳಷ್ಟು ಮಹಿಳೆಯರು ಸಾಲ ಪಡೆದಿದ್ದರು. ಸಾಲ ಹಾಗೂ ಬಡ್ಡಿಯನ್ನು ವಾಪಸ್ ಕೊಡದ ಮಹಿಳೆಯರನ್ನು ಕುಮಾರ್ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ. ಈ ವಿಷಯ ತಿಳಿದ ಪತ್ನಿ ಡೋರಿನ್ ಕುಮಾರ್ ಹಲವು ಬಾರಿ ಬುದ್ಧಿ ಹೇಳಿದ್ದಳು. ಆದರೆ ಕುಮಾರ್ ತನ್ನ ಚಾಳಿಯನ್ನು ಮುಂದುವರೆಸಿದ್ದ.
ಕೆಲ ದಿನಗಳ ಹಿಂದೆ ಕುಮಾರ್‌ನಿಂದ ಶ್ರೀಧರ್ ಎಂಬ ವ್ಯಕ್ತಿಯು 5 ಲಕ್ಷ ರೂ. ಸಾಲ ಪಡೆದಿದ್ದು, ಬಡ್ಡಿ ಪಾವತಿಸುತ್ತಿದ್ದ. ಕುಮಾರ್ ಬಳಿ ಬರುತ್ತಿದ್ದ ಶ್ರೀಧರ್ ಡೋರಿನ್‌ಗೆ ಪರಿಚಯವಾಗಿ ಆಕೆ ಕೂಡ ಆತನಿಂದ ಬಡ್ಡಿ ವಸೂಲು ಮಾಡುತ್ತಿದ್ದಳು. ಪತಿಯ ಹೆಂಗಸರ ಸಹವಾಸದಿಂದ ರೋಸಿ ಹೋಗಿದ್ದ ಡೋರಿನ್, ಈ ಬಗ್ಗೆ ಶ್ರೀಧರ್ ಬಳಿ ಹೇಳಿಕೊಂಡಿದ್ದಳು. ಪತಿಯನ್ನು ಕೊಂದರೆ 5 ಲಕ್ಷ ಸಾಲ ಮನ್ನಾ ಮಾಡುವುದಲ್ಲದೆ 30 ಲಕ್ಷ ರೂ. ಗಳ ಸುಪಾರಿ ಕೊಡುವುದಾಗಿಯೂ ತಿಳಿಸಿದ್ದಳು.
ಹಣದ ಆಸೆಗೆ ಬಿದ್ದ ಶ್ರೀಧರ್ ತನಗೆ ಪರಿಚಯವಿದ್ದ ಕೊಲೆ ಯತ್ನ, ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಭು ಎಂಬಾತನನ್ನು ಸಂಪರ್ಕಿಸಿದ್ದ. ಪ್ರಭು ಜೊತೆ ದಿನೇಶ್ ಹಾಗೂ ಮತ್ತಿಬ್ಬರಾದ ಅವಿನಾಶ್, ಪ್ಯಾಟ್ರಿಕ್ ಸೇರಿಕೊಂಡು ಕುಮಾರನ ಕೊಲೆಗೆ ಸಂಚು ರೂಪಿಸಿದ್ದರು. ಎ.6ರಂದು ಮಧ್ಯಾಹ್ನ ಕುಮಾರ್‌ಗೆ ಪರಿಚಯವಿದ್ದ ಕ್ಲಾರ ಮತ್ತು ರೇವತಿ ಅವರನ್ನು ಸಂಪರ್ಕಿಸಿ ಅವರ ಮೂಲಕ ಕುಮಾರ್‌ನನ್ನು ಕಲ್ಪಳ್ಳಿ ಸ್ಮಶಾನದ ಬಳಿ ಕರೆಸಿಕೊಂಡಿದ್ದಾರೆ. ಸ್ನೇಹಿತ ಮಳಿ ಎಂಬಾತನ ಜತೆ ಡಿಯೋ ಸ್ಕೂಟರ್‌ನಲ್ಲಿ ಬಂದ ಕುಮಾರ್‌ನನ್ನು ಅಡ್ಡಗಟ್ಟಿದ ಅವಿನಾಶ್, ದಿನೇಶ್ ಹಾಗೂ ಪ್ಯಾಟ್ರಿಕ್ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದರು.
ಈ ಸಂಬಂಧ ಕುಮಾರ್ ಅವರ ಪತ್ನಿ ಡೋರಿನ್ ಪುಲಿಕೇಶಿ ನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಈ ಕೊಲೆ ಪ್ರಕರಣ ಸಂಬಂಧ ಕ್ಲಾರ ಹಾಗೂ ರೇವತಿ ಅವರನ್ನು ವಿಚಾರಣೆಗೊಳಪಡಿಸಿದ್ದು, ಕೊಲೆಯಲ್ಲಿ ಅವರ ಪಾತ್ರವಿದ್ದು ಅವರನ್ನೂ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದರು.







