ಇಎಂವಿ ಸಮರ್ಥಿಸಿಕೊಂಡ ವೀರಪ್ಪ ಮೊಯ್ಲಿ
ಕಾಂಗ್ರೆಸ್‌ಗೆ ಮುಜುಗರ ತಂದ ಮಾಜಿ ಸಚಿವ

ಹೊಸದಿಲ್ಲಿ, ಎ.12: ಇಎಂವಿ (ವಿದ್ಯುನ್ಮಾನ ಮತಯಂತ್ರ) ಬಳಕೆಗೆ ಕಾಂಗ್ರೆಸ್ ಪಕ್ಷದ ವಿರೋಧ ಮುಂದುವರಿದಿರುವಂತೆಯೇ, ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಇಎಂವಿಯನ್ನು ಸಮರ್ಥಿಸಿಕೊಳ್ಳುವ ಮೂಲಕ ಪಕ್ಷಕ್ಕೆ ಮುಜುಗುರ ಉಂಟು ಮಾಡಿದ್ದಾರೆ.
ಇಎಂವಿ ಬಳಕೆ ವಿರೋಧಿಸಿ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಭೆ ನಡೆದಿತ್ತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದ ವೀರಪ್ಪ ಮೊಯ್ಲಿ, ಆಧುನಿಕ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವುದಕ್ಕೆ ನನ್ನ ಸಹಮತವಿದೆ. ಇಎಂವಿ ಬದಲು ಈ ಹಿಂದಿನಂತೆ ಬ್ಯಾಲೆಟ್ ಪೇಪರ್ ಬಳಸುವ ಪ್ರಶ್ನೆಯೇ ಇಲ್ಲ. ನಾವು ಮುಂದೆ ಸಾಗಬೇಕು, ಹಿಂದಕ್ಕೆ ಸಾಗುವುದಲ್ಲ. ಇದು ಪ್ರಗತಿಪರ ನಡೆಯಲ್ಲ ಎಂದರು. ಆದರೂ ಈ ಆರೋಪದ ಬಗ್ಗೆ ಉನ್ನತ ಮಟ್ಟದ ಸಮಿತಿಯೊಂದು ತನಿಖೆ ನಡೆಸಬೇಕು ಎಂದರು.
ಬಳಿಕ ಎನ್‌ಡಿ ಟಿವಿ ಜೊತೆ ಮಾತನಾಡಿದ ಮೊಯ್ಲಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಎಂವಿ ವ್ಯವಸ್ಥೆ ಆರಂಭಗೊಂಡಿತು. ಚುನಾವಣೆಯ ಪರಾಭವಕ್ಕೆ ಇಎಂವಿ ದೂಷಿಸುವುದು ಪರಾಜಯವಾದಿಗಳ ಲಕ್ಷಣ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೂಡಾ ಇಎಂವಿ ಬಗ್ಗೆ ಕಳವಳ ವ್ಯಕ್ತವಾಗಿತ್ತು ಮತ್ತು ಈ ಯಂತ್ರಗಳನ್ನು ಆಗ ಪರೀಕ್ಷೆ ನಡೆಸಲಾಗಿತ್ತು ಎಂದು ಹೇಳಿದರು.
ಉ.ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಭಾರೀ ಬಹುಮತ ಪಡೆಯಲು ಕಾರಣ ಇಎಂವಿಯಲ್ಲಿದ್ದ ದೋಷವೇ ಕಾರಣ ಎಂದು ಕಾಂಗ್ರೆಸ್ ತಕರಾರು ಎತ್ತಿತ್ತು. ಆದರೆ ಪಂಜಾಬ್‌ನಲ್ಲಿ ಪಕ್ಷಕ್ಕೆ ದೊರೆತ ಗೆಲುವಿನ ಬಗ್ಗೆ ಚಕಾರ ಎತ್ತಿರಲಿಲ್ಲ. ಆದರೆ ಇಎಂವಿ ಬಗ್ಗೆ ಅಪಸ್ವರ ಎತ್ತಿದ್ದ ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಪಂಜಾಬ್‌ನಲ್ಲಿ ಕೂಡಾ ಮತಯಂತ್ರಗಳಲ್ಲಿ ಅಕ್ರಮ ನಡೆದಿತ್ತು ಎಂದು ದೂರಿದ್ದರು.
ಚುನಾವಣಾ ಆಯೋಗವನ್ನು ಭೇಟಿ ಮಾಡಿದ ವಿಪಕ್ಷಗಳ ನಿಯೋಗದಲ್ಲಿ ಪಾಲ್ಗೊಳ್ಳಲು ಕೇಜ್ರೀವಾಲ್‌ಗೆ ಆಹ್ವಾನ ನೀಡಲಾಗಿಲ್ಲ.