ಶಿವಮೊಗ್ಗ : ಸರಕಾರಿ ಸಿಟಿ ಬಸ್ ಸಂಚಾರಕ್ಕೆ ಆಗ್ರಹಿಸಿ ಧರಣಿ
ಶಿವಮೊಗ್ಗ,ಎ.12: ನಗರದ ಗೋಪಾಳದ 100 ಅಡಿ ರಸ್ತೆ ಮಾರ್ಗದಿಂದ ಗಾಜನೂರುವರೆಗಿನ ಪ್ರದೇಶಗಳಿಗೆ ಸರಕಾರಿ ಸಿಟಿ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಬುಧವಾರ ನಗರದ ಡಿಸಿ ಕಚೇರಿ ಎದುರು ಧರಣಿ ನಡೆಸಿದರು.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ನ್ಯೂ ಮಂಡ್ಲಿ, ಬೈಪಾಸ್ ರಸ್ತೆ, ಗೋಪಾಳ ರಸ್ತೆ, ಇಲಿಯಾಜ್ ನಗರ, ಗಂಧರ್ವ ನಗರ, ಖಾಝಿ ನಗರ, ಕಳೆಗಿನ ತುಂಗಾನಗರ, ಚಾಲುಕ್ಯ ನಗರ, ಗಾಜನೂರು ರಸ್ತೆಯಲ್ಲಿ ಬಡ, ಮಧ್ಯಮ ವರ್ಗದವರು ಅತೀ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಸಿಟಿ ಬಸ್‌ಗೆ ಕಿ.ಮೀ.ದೂರ ಸಂಚರಿಸುವಂತಹ ಪರಿಸ್ಥಿತಿಯಿದ್ದು, ಇದರಿಂದಾಗಿ ಈ ಭಾಗದ ಜನತೆಗೆ ತೊಂದರೆ ಉಂಟಾಗಿದೆ ಎಂದು ಧರಣಿ ನಿರತರು ದೂರಿದ್ದಾರೆ.
ಈಗಾಗಲೇ ಸ್ಥಳೀಯರು ತಮ್ಮ ಬಡಾವಣೆಗೆ ಸರಕಾರಿ ಸಿಟಿ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಸ್ಮಾರ್ಟ್ ಸಿಟಿಯಾಗಿ ಅಭಿವೃದ್ದಿಯಾಗುತ್ತಿರುವ ನಗರದಲ್ಲಿ ಸಾರ್ವಜನಿಕರ ಸಂಚಾರ ವ್ಯವಸ್ಥೆಯ ಬಗ್ಗೆ ಬಲವರ್ಧನೆ ಮಾಡಬೇಕಾಗಿದೆ ಎಂದು ಧರಣಿ ನಿರತರು ತಿಳಿಸಿದರು.
ಜಿಲ್ಲಾಡಳಿತವು ಸರಕಾರಿ ಸಿಟಿ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರವಾಗಿ ಧರಣಿ ನಡೆಸುಲಾಗುವುದೆಂದು ಧರಣಿಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಧರಣಿಯಲ್ಲಿ ಮುಖಂಡರಾದ ಮೊಹಮ್ಮದ್ ವಸೀಖ್, ಮುಹಮ್ಮದ್ ಅಖಿಲ್, ಮಕ್ಸುದ್, ಆರೀಪ್, ಏಹಯಾಖಾನ್ ಮತ್ತಿತರರು ಭಾಗವಹಿಸಿದ್ದರು.







