ಖುರೇಶಿ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ: ನಿಯೋಗದಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ

ಮಂಗಳೂರು, ಎ. 12: ಅಹ್ಮದ್ ಖುರೇಶಿ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಸಿಒಡಿ ತನಿಖೆಗೊಪ್ಪಿಸುವಂತೆ ಆಗ್ರಹಿಸಿ ಜಸ್ಟಿಸ್ ಫಾರ್ ಖುರೈಶ್ ಸಂಯುಕ್ತ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಖುರೇಶಿ ಮೇಲೆ ದೌರ್ಜನ್ಯ ನಡೆಸಿರುವ ಸಿಸಿಬಿ ಇನ್ಸ್‌ಪೆಕ್ಟರ್ ಸುನೀಲ್ ನಾಯ್ಕ್, ಸಬ್ ಇನ್ಸ್‌ಪೆಕ್ಟರ್ ಶ್ಯಾಂ ಸುಂದರ್, ಸಿಸಿಬಿ ಪೊಲೀಸ್ ಸಿಬ್ಬಂದಿಯಾದ ಆಶಿತ್ ಡಿಸೋಜ, ಯೋಗೀಶ್, ರಾಮ, ಚೆನ್ನಪ್ಪ, ರಾಜೇಂದ್ರ, ಮಣಿಯನ್ ಮತ್ತು ಮಣಿ ಎಂಬವರನ್ನು ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಖುರೇಶಿಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರಕಾರ ಭರಿಸಬೇಕು, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಆತನಿಗೆ ಜೀವನಾಧಾರಕ್ಕಾಗಿ ಪರಿಹಾರವನ್ನು ಘೋಷಿಸಬೇಕು, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದವರ ಮೇಲೆ ಹಾಕಲಾಗಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆಯಬೇಕು, ಮುಸ್ಲಿಮರ ವಿರುದ್ಧ ಪೊಲೀಸ್ ಇಲಾಖೆಯನ್ನು ಎತ್ತಿ ಕಟ್ಟುವ ಸಲುವಾಗಿ ದುಷ್ಕರ್ಮಿಗಳ ಪಿತೂರಿಯಿಂದ ಉರ್ವ ಪೊಲೀಸ್ ಠಾಣಾ ಎಎಸ್‌ಐ ಐತಪ್ಪರ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಸಿಒಡಿ ತನಿಖೆಗೊಳಪಡಿಸಿ ಇದರ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆಳೆಯಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ನಿಯೋಗವು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ರಾಜ್ಯ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ರಾಜ್ಯ ಉಪಾಧ್ಯಕ್ಷ ಅಶ್ರಫ್ ಕೆ.ಇ., ಮುಸ್ಲಿಂ ಐಕ್ಯತಾ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ, ಕೆಪಿಸಿಸಿ ಸದಸ್ಯ ಯು.ಕೆ.ಮೋನು, ಜಿ.ಪಂ. ಸದಸ್ಯ ಕೆ.ಕೆ. ಶಾಹುಲ್ ಹಮೀದ್, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಮುಮ್ತಾಝ್ ಅಲಿ, ಪಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಹೈಕೋರ್ಟ್ ವಕೀಲ ಮುಝಫ್ಫರ್ ಅಹ್ಮದ್, ಎಸ್‌ವೈಎಲ್ ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕಿನಾರ, ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಡಾ.ಅಮೀರ್ ತುಂಬೆ ಮೊದಲಾದವರು ನಿಯೋಗದಲ್ಲಿದ್ದರು.







