ಜನಾಂಗೀಯ ತಾರತಮ್ಯ ಮಕ್ಕಳಲ್ಲಿ 6 ತಿಂಗಳಲ್ಲೇ ಆರಂಭ : ನೂತನ ಸಂಶೋಧನೆ

ಟೊರಾಂಟೊ, ಎ. 12: ಆರು ತಿಂಗಳ ಎಳೆಯ ಶಿಶುಗಳೂ ಜನಾಂಗೀಯ ತಾರತಮ್ಯವನ್ನು ತೋರಿಸುತ್ತವೆ ಎಂಬುದಾಗಿ ನೂತನ ಸಂಶೋಧನೆಯೊಂದು ತಿಳಿಸಿದೆ. ಜನಾಂಗ ಆಧಾರಿತ ತಾರತಮ್ಯವು ಮಕ್ಕಳಲ್ಲಿ ಶಾಲಾ ಪೂರ್ವ ವರ್ಷಗಳಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಹಾಲಿ ನಂಬಿಕೆಗೆ ಈ ಸಂಶೋಧನೆ ಸವಾಲೊಡ್ಡಿದೆ.
‘‘ಈ ಸಂಶೋಧನೆಯ ಫಲಿತಾಂಶವು ಹಲವು ಕಾರಣಗಳಿಗಾಗಿ ಮಹತ್ವದ್ದಾಗಿದೆ. ಜನಾಂಗಾಧಾರಿತ ತಾರತಮ್ಯವು ಮಗುವಿನ ಮೊದಲ ವರ್ಷದ ಪ್ರಥಮಾರ್ಧದಲ್ಲೇ ಆರಂಭಗೊಳ್ಳುತ್ತದೆ ಎಂದು ಅದು ಹೇಳುತ್ತದೆ’’ ಎಂದು ಕೆನಡದ ಟೊರಾಂಟೊ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಕಾಂಗ್ ಲೀ ಹೇಳುತ್ತಾರೆ.
ಅಧ್ಯಯನ ವರದಿಯು ‘ಡೆವೆಲಪ್‌ಮೆಂಟಲ್ ಸಯನ್ಸ್’ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಅಧ್ಯಯನದ ವೇಳೆ, ಮೂರರಿಂದ 10 ತಿಂಗಳ ಪ್ರಾಯದ ಶಿಶುಗಳಿಗೆ ಹೆಂಗಸರ ಮುಖಭಾವದ ವೀಡಿಯೊಗಳನ್ನು ತೋರಿಸಲಾಯಿತು. ಪ್ರತಿಯೊಂದು ಮುಖಗಳನ್ನು ನೋಡುವ ಮೊದಲು ಮಕ್ಕಳಿಗೆ ಸಂಗೀತದ ತುಣುಕುಗಳನ್ನು ಕೇಳಿಸಲಾಯಿತು.
ಈ ಪ್ರಯೋಗವು ನಾಲ್ಕು ಮುಖ-ಸಂಗೀತ ಸಂಯೋಜನೆಗಳನ್ನು ಹೊಂದಿದೆ. ಅವುಗಳೆಂದರೆ, ಸಂತೋಷದ ಸಂಗೀತ-ಸ್ವಜನಾಂಗೀಯ ಮುಖಗಳು, ದುಃಖದ ಸಂಗೀತ-ಸ್ವಜನಾಂಗೀಯ ಮುಖಗಳು, ಸಂತೋಷದ ಸಂಗೀತ-ಇತರ ಜನಾಂಗೀಯ ಮುಖಗಳು ಮತ್ತು ದುಃಖದ ಸಂಗಿತ ಮತ್ತು ಇತರ ಜನಾಂಗೀಯ ಮುಖಗಳು.
ಸಂತೋಷದ ಸಂಗೀತವಿದ್ದಾಗ ಆರರಿಂದ ಒಂಬತ್ತು ತಿಂಗಳ ಪ್ರಾಯದ ಶಿಶುಗಳು ತಮ್ಮದೇ ಜನಾಂಗದ ಮುಖಗಳನ್ನು ದೀರ್ಘ ಕಾಲ ನೋಡಿದವು ಹಾಗೂ ದುಃಖದ ಸಂಗೀತವಿದ್ದಾಗ ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆಗಳನ್ನು ನೀಡಿದವು.
ಅದೇ ವೇಳೆ, ಸಂತೋಷದ ಸಂಗೀತಕ್ಕೆ ಹೋಲಿಸಿದರೆ, ದುಃಖದ ಸಂಗೀತ ಮೊಳಗಿದಾಗ ಇದೇ ಮಕ್ಕಳು ಇತರ ಜನಾಂಗೀಯ ಮುಖಗಳತ್ತ ಹೆಚ್ಚು ಕಾಲ ನೋಡಿದವು ಎಂದು ಸಂಶೋಧನೆ ತಿಳಿಸಿದೆ.







