ಉತ್ತರಪ್ರದೇಶದಲ್ಲಿ ಮತ್ತೆ ತಲೆಯೆತ್ತಿದ ಗೂಂಡಾರಾಜ್
‘ಹಿಂದೂ ಯುವವಾಹಿನಿ’ ಬೆಂಬಲಿಗರಿಂದ ಮನೆಗೆ ನುಗ್ಗಿ ಯುವಜೋಡಿಯ ಮೇಲೆ ಹಲ್ಲೆ

ಮೀರತ್,ಎ.12: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ಥಾಪಿಸಿರುವ ಹಿಂದುಯುವವಾಹಿನಿ ಸಂಘಟನೆಯ ಯುವಕರ ಗುಂಪೊಂದು ಮೇರಠ್‌ನಲ್ಲಿ ಮನೆಯೊಂದರೊಳಗೆ ನುಗ್ಗಿ, ಯುವತಿಯೊಬ್ಬಳ ಜೊತೆಗಿದ್ದ ಮುಸ್ಲಿಂ ಯುವಕನೊಬ್ಬನನ್ನು ಹಿಗ್ಗಾಮಗ್ಗಾ ಥಳಿಸಿರುವುದಾಗಿ ವರದಿಯಾಗಿದೆ.
ಹಲ್ಲೆ ನಡೆಸಿದ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಹಿಂದೂಯುವ ವಾಹಿನಿಯ ಕಾರ್ಯಕರ್ತರು ಯುವಕನನ್ನು ಹಾಗೂ ಮಹಿಳೆಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ವಾಸಿಂ ಎಂದು ಪೊಲೀಸರು ಗುರುತಿಸಿದ್ದಾರೆ. ಮೇರಠ್‌ನ ಶಾಸ್ತ್ರಿ ನಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವಕ ಹಾಗೂ ಆತನೊಂದಿಗಿದ್ದ ಯುವತಿ ಇಬ್ಬರೂ ಮುಸ್ಲಿಮರೆಂದು ತಿಳಿದುಬಂದಿದ್ದು, ಪೊಲೀಸರು ಆನಂತರ ಇಬ್ಬರನ್ನೂ ಬಿಡುಗಡೆಗೊಳಿಸಿದ್ದಾರೆಂದು ಪೊಲೀಸ್ ಅಧೀಕ್ಷಕ ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.
ಮುಝಫರ್‌ನಗರದ ನಿವಾಸಿಯಾದ ವಾಸಿಮ್, ಮೀರತ್‌ನ ಹೊಟೇಲೊಂದರಲ್ಲಿ ಉದ್ಯೋಗಿಯಾಗಿದ್ದು, ಆತ ಮಂಗಳವಾರ ಶಾಸ್ತ್ರಿ ನಗರದಲ್ಲಿರುವ ತನ್ನ ಬಾಡಿಗೆ ಕೊಠಡಿಗೆ ಗೆಳತಿಯನ್ನು ಆಹ್ವಾನಿಸಿದ್ದನೆನ್ನಲಾಗಿದೆ. ಆದರೆ ಕೆಲವು ಮಂದಿ ಸ್ಥಳೀಯರು ಹಿಂದೂ ಯುವವಾಹಿನಿಯ ನಾಯಕರಾದ ಸಚಿನ್ ಗುಪ್ತಾ ಹಾಗೂ ನಾಗೇಂದ್ರ ತೋಮಾರ್ ಅವರಿಗೆ ವಿಷಯ ತಿಳಿಸಿದರು. ಆಗ ಸಂಘಟನೆಯ ಕಾರ್ಯಕರ್ತರ ದೊಡ್ಡ ಗುಂಪನ್ನು ಕಟ್ಟಿಕೊಂಡು ಬಂದ ಇವರಿಬ್ಬರು ಕೊಠಡಿಯೊಳಗೆ ನುಗ್ಗಿ, ವಾಸಿಮ್ ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ.







