ಡಿಸಿ ಮೇಲಿನ ಹಲ್ಲೆ: ಸೂತ್ರದಾರರ ಬಂಧನಕ್ಕೆ, ಗೂಂಡಾ ಕಾಯ್ದೆಗೆ ಆಗ್ರಹ
ಜಿಪಂ ಸಾಮಾನ್ಯ ಸಭೆ

ಉಡುಪಿ, ಎ.12: ಕುಂದಾಪುರ ತಾಲೂಕಿನ ಕಂಡ್ಲೂರಿನಲ್ಲಿ ಇತ್ತೀಚೆಗೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಜಿಲ್ಲಾಧಿಕಾರಿ, ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ಕಂಡ್ಲೂರು ವಿಎ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆ ಹಾಗೂ ಕೊಲೆ ಪ್ರಯತ್ನಕ್ಕೆ ಇಂದು ನಡೆದ ಉಡುಪಿ ಜಿಪಂನ ಆರನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಆಕ್ರೋಶ ವ್ಯಕ್ತಪಡಿಸಿ ಘಟನೆಯ ಬಗ್ಗೆ ಖಂಡನಾ ನಿರ್ಣಯ ಮಂಡಿಸಿದರು.
ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಬುಧವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರವಾದ ವಾದ-ವಿವಾದ, ಆರೋಪ-ಪ್ರತ್ಯಾರೋಪಗಳು ದಟ್ಟವಾಗಿ ಕೇಳಿಬಂದವು. ಅಕ್ರಮ ಮರಳುಗಾರಿಕೆ ಸ್ಥಳದಲ್ಲಿ ಜಿಲ್ಲಾಧಿಕಾರಿ ಸಹಿತ ಕಂದಾಯ ಅಧಿಕಾರಿಗಳ ಮೇಲೆ ನಡೆಸಿದ ಕೊಲೆ ಯತ್ನ ಪ್ರಕರಣದ ಕುರಿತು ಸಭೆಯಲ್ಲಿ ಕಾವೇರಿದ ಸ್ಥಿತಿಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದ ಸ್ಥಳೀಯ ಹಾಗೂ ಹೊರಗಿನ ಕಾರ್ಮಿಕರನ್ನು ಮಾತ್ರ ಬಂಧಿಸಲಾಗಿದೆ. ಮೂಲ ಸೂತ್ರಧಾರರನ್ನು ಇನ್ನೂ ಬಂಧಿಸಿಲ್ಲ. ಅವರನ್ನು ಕೂಡ ಬಂಧಿಸಿ ಗೂಂಡಾ ಕಾಯ್ದೆ ಹಾಕಿ ಜೈಲಿಗಟ್ಟಿ ಎನ್ನುವ ಆಗ್ರಹಕ್ಕೆ ಜೋರಾಗಿ ಕೇಳಿಬಂತು. ಪ್ರಕರಣದ ಬಗ್ಗೆ ಸಂಪೂರ್ಣ ಬೆಳವಣಿಗೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸಭೆಗೆ ಬಂದು ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಕೂಡಲೇ ಎಸ್ಪಿಯವರಿಗೆ ಸಭೆಗೆ ಬರಲು ಕರೆ ಕಳುಹಿಸಲಾಯಿತು. ಎಸ್ಪಿ ಅವರು ಬೆಂಗಳೂರಿಗೆ ತೆರಳಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿ ವಿಷ್ಣುವರ್ಧನ್ ಸಭೆಗೆ ಬಂದು ಹೇಳಿಕೆ ನೀಡಿದರಲ್ಲದೇ, ಆಕ್ರೋಶಿತ ಸದಸ್ಯರನ್ನು ಸಮಾಧಾನಪಡಿಸಿದರು. ಎಲ್ಲರ ಪ್ರಶ್ನೆಗಳಿಗೂ ಉತ್ತರಿಸುವ ಮೂಲಕ ಸದಸ್ಯರು ವ್ಯಕ್ತಪಡಿಸಿದ ಆತಂಕ, ಅಸಮಾಧಾನಗಳನ್ನು ದೂರಮಾಡಿದರು.
ಎಎಸ್ಪಿ ಉತ್ತರ: ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಉಡುಪಿ, ಕುಂದಾಪುರ ಡಿವೈಎಸ್‌ಪಿ ನೇತೃತ್ವದಲ್ಲಿ ತಂಡಗಳನ್ನು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಸಹ ರಚಿಸಲಾಗಿದೆ. ಪ್ರತಿ ಠಾಣಾ ಮಟ್ಟದಲ್ಲಿಯೂ ದಿನವಿಡೀ ಒಬ್ಬರಾದರೂ ಅಧಿಕಾರಿಗಳು ಲಭ್ಯವಿರುವಂತೆ ಕ್ರಮ ವಹಿಸಲಾಗಿದೆ. ಪದೇ ಪದೇ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದ ಹೊರರಾಜ್ಯದ ಐವರನ್ನು ಗಡೀಪಾರು ಮಾಡಲಾಗಿದೆ. ಅಕ್ರಮ ಮರಳುಗಾರಿಕೆಯ ಸೂತ್ರಧಾರರ ಬಂಧನ, ಅಕ್ರಮ ಮರಳುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವವರನ್ನು ಗುರುತಿಸಿಕೊಂಡು ಅವರ ವಿರುದ್ಧ ಗೂಂಡಾ ಕಾಯ್ದೆ ಹಾಕುವ ಚಿಂತನೆ ನಡೆಸಲಾಗುತ್ತಿದೆ ಎಂದು ವಿಷ್ಣುವರ್ಧನ ನುಡಿದರು.
ಡಿಸಿ,ಎಸಿ ಹಾಗೂ ಇತರ ಅಧಿಕಾರಿಗಳ ಮೇಲಿನ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಮಂದಿಯ ಗುಂಪಿನಲ್ಲಿದ್ದ 20 ಮಂದಿಯನ್ನು (ಒಬ್ಬ ಬಾಲಾಪರಾಧಿ) ಈವರೆಗೆ ಬಂಧಿಸಲಾಗಿದೆ. ಟವರ್ ಲೊಕೇಶನ್, ಕಾಲ್‌ಲಿಸ್ಟ್‌ಗಳನ್ನು ಪೊಲೀಸ್ ತಂತ್ರಜ್ಞರು ಪರಿಶೀಲಿಸಿ, ಇತರ ಆಯಾಮಗಳ ತನಿಖೆ ನಡೆಸಿಯೇ ಈ ಎಲ್ಲಾ ಬಂಧನ ಮಾಡಲಾಗಿದೆ. ಅವರಲ್ಲಿ 9 ಮಂದಿ ಹೊರರಾಜ್ಯದವರು. ಉಳಿದವರೆಲ್ಲ ಸ್ಥಳೀಯರಾಗಿದ್ದಾರೆ. ಇನ್ನೂ ಹಲವರ ಬಂಧನಕ್ಕೆ ಪೊಲೀಸ್ ತಂಡ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಿದ ಎಎಸ್‌ಪಿ, ಜಿಲ್ಲೆಯ ಅನೇಕ ಶಾಲಾ-ಕಾಲೇಜು ಆವರಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವವರ ಮೇಲೂ ನಿರ್ದಾಕ್ಷಿಣ್ಯ ಕ್ರಮಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿ ಈ ಬಗ್ಗೆ ಸದಸ್ಯರು ವ್ಯಕ್ತಪಡಿಸಿದ ಕಳವಳಕ್ಕೆ ಉತ್ತರಿಸಿದರು.
ಎಎಸ್‌ಪಿಯವರು ನೀಡಿದ ಉತ್ತರದ ಬಳಿಕ ಸಮಾಧಾನಗೊಂಡಂತೆ ಕಂಡುಬಂದ ಸದಸ್ಯರು ಜಿಲ್ಲಾಧಿಕಾರಿ ಮೇಲಾದ ಕೊಲೆಯತ್ನ ಪ್ರಕರಣಕ್ಕೆ ಖಂಡನಾ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಂಡರು.
ಖಂಡನಾ ನಿರ್ಣಯಕ್ಕೆ ಆಗ್ರಹ: ಚರ್ಚೆಯನ್ನು ಪ್ರಾರಂಭಿಸಿದ ಸುರೇಶ್ ಬಟ್ವಾಡಿ, ಘಟನೆಯನ್ನು ಉಲ್ಲೇಖಿಸಿ ಈ ಬಗ್ಗೆ ಸಭೆ ಖಂಡನಾ ನಿರ್ಣಯ ಹಾಗೂ ಜಿಲ್ಲಾಧಿಕಾರಿಯ ಅಭಿನಂದನಾ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅವರನ್ನು ಬಿಜೆಪಿಯ ಅನೇಕ ಸದಸ್ಯರು ಬೆಂಬಲಿಸಿದರು.
ಆಗ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಸದಸ್ಯ ಜನಾರ್ದನ ತೋನ್ಸೆ, ಅಧಿಕಾರಿಗಳ ಮೇಲೆಯೇ ಹಲ್ಲೆಗೆ ಮುಂದಾಗುವ ಸ್ಥಿತಿಗೆ ನಮ್ಮ ವ್ಯವಸ್ಥೆಯೇ ಕಾರಣ. ಎಲ್ಲಿ ಲೋಪವಾಗುತ್ತಿದೆ ಎನ್ನುವುದನ್ನು ವಿಮರ್ಶಿಸೋಣ ಎಂದು ಹೇಳುತ್ತಿದ್ದಂತೆ ಇದನ್ನು ತೀವ್ರವಾಗಿ ಆಕ್ಷೇಪಿಸಿದ ವಿಪಕ್ಷ ಸದಸ್ಯರು, ಇದಕ್ಕೆಲ್ಲಾ ಸಚಿವರ ನಿರ್ಲಕ್ಷ ಕಾರಣ ಎಂದು ಆರೋಪಿಸಿದರು.
ಮರಳು ದಾಸ್ತಾನು: ಜಿಲ್ಲಾಧಿಕಾರಿಯಾಗಿ ನೇಮಕಗೊಂಡು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುತ್ತಿರುವ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಅಕ್ರಮ ಮರಳುಗಾರಿಕೆಯ ಅಡ್ಡೆಯ ಮೇಲೆ ಈಗ ದಾಳಿ ನಡೆಸಿ ಅಲ್ಲಲ್ಲಿ ದಾಸ್ತಾನಿರಿಸಿದ್ದ ಮರಳುಗಳನ್ನು ವಶಕ್ಕೆ ಪಡೆದು ಕುಂದಾಪುರ ಯಾರ್ಡ್‌ನಲ್ಲಿ ಶೇಖರಿಸಿಡಲಾಗಿದೆ. ಈಗ ಸದ್ಯಕ್ಕೆ 89 ಲೋಡ್ ದಾಸ್ತಾನಿದೆ. ಬೇಡಿಕೆ ಬಂದಂತೆ ವಿತರಣೆ ಮಾಡಲಾಗುವುದು. ಹೆಚ್ಚಿನ ಮರಳಿನ ಅಗತ್ಯ ಕಂಡುಬಂದಲ್ಲಿ ಮಂಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ಮರಳು ತರಿಸಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ, ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಎಂ-ಸ್ಯಾಂಡ್‌ಗೆ ಉತ್ತೇಜನ
ಬೆಂಗಳೂರು, ಹಾಸನ, ಮೈಸೂರಿನಲ್ಲಿರುವಂತೆ ಉಡುಪಿ ಜಿಲ್ಲೆಯಲ್ಲಿಯೂ ಎಂ-ಸ್ಯಾಂಡ್‌ನ 3 ಯೂನಿಟ್‌ಗಳಿಗೆ ಅನುಮತಿ ಕೊಡಲಾಗಿದೆ. ಕಾರ್ಕಳ ಯುನಿಟ್ ಶೀಘ್ರವೇ ಕಾರ್ಯಾರಂಭಿಸಲಿದೆ. ಮರಳು ಬದಲು ಎಂ.ಸ್ಯಾಂಡ್‌ಗೆ ಉತ್ತೇಜನ ನೀಡಿ ಅದನ್ನು ಖರೀದಿಸುವಂತೆ ಸಿಇಒ ಮನವಿ ಮಾಡಿದರು.
ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಹಿಂದಿನ ಜಿಲ್ಲಾಡಳಿತ ನೀಡಿದ ಪರ್ಮಿಟನ್ನು ಚೆನ್ನೈ ಹಸಿರು ಪೀಠ ರದ್ದುಗೊಳಿಸಿದ್ದು, ಪ್ರಾರಂಭದಿಂದ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ನಾನ್ ಸಿಆರ್‌ಝೆಡ್ ಪ್ರದೇಶದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಇರುವ ತಡೆಯಾಜ್ಞೆ ತೆರವಿಗೆ ಕ್ರಮ ತೆಗೆದುಕೊಳ್ಳ ಲಾಗಿದೆ ಎಂದರು.
ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಕೇಂದ್ರ ಪರಿಸರ ಇಲಾಖೆ ಮಾರ್ಗದರ್ಶಿ ಸೂತ್ರಗಳಂತೆ ಎಲ್ಲಾ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಮರಳು ದಿಬ್ಬಗಳನ್ನು ಗಣಿ ಇಲಾಖೆ ಗುರುತಿಸಿದ್ದು, ಸುರತ್ಕಲ್ ಎನ್‌ಐಟಿಕೆಯ ತಜ್ಞರು ನಾಳೆ ಬಂದು ಅವುಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ರಾಜ್ಯ ಸರಕಾರಕ್ಕೆ ವರದಿ ನೀಡಲಿದ್ದಾರೆ. ಅನಂತರ ರಾಜ್ಯ ಸರಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿಇಒ ನುಡಿದರು.







