ಆರ್ಟ್ ಆಫ್ ಲಿವಿಂಗ್ ‘ಉತ್ಸವ’ದಿಂದ ಯಮುನಾ ದಂಡೆಗೆ ಭಾರೀ ಹಾನಿ
ಹಸಿರು ನ್ಯಾಯಾಧೀಕರಣಕ್ಕೆ ತಜ್ಞರ ಸಮಿತಿ ವರದಿ

ಹೊಸದಿಲ್ಲಿ,ಎ.12: ಶ್ರೀರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಕಳೆದ ವರ್ಷದ ಮಾರ್ಚ್‌ನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದಿಂದಾಗಿ ‘‘ನಾಶಗೊಂಡಿರುವ ’’ ಯಮುನಾ ನದಿದಂಡೆ ಪ್ರದೇಶದ ಪುನರುಜ್ಜೀವನಕ್ಕೆ ಹತ್ತು ವರ್ಷಗಳೇ ಬೇಕಾಗಬಹುದು ಹಾಗೂ 13.29 ಕೋಟ್ಷಿ ರೂ. ವೆಚ್ಚ ತಗಲಲಿದೆಯೆಂದು ತಜ್ಞರ ಸಮಿತಿಯೊಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ತಿಳಿಸಿದೆ.
ಹಾನಿಗೀಡಾಗಿರುವ ಯಮುನಾ ನದಿದಂಡೆ ಪ್ರದೇಶವನ್ನು ಯಥಾಸ್ಥಿತಿಗೆ ತರಲು ಬೃಹತ್ ಮಟ್ಟದ ಕಾಮಗಾರಿ ನಡೆಯಬೇಕಾಗಿದೆಯೆಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ತಜ್ಞರ ಸಮಿತಿ ತಿಳಿಸಿದೆ.ಆರ್ಟ್ ಆಫ್ ಲಿವಿಂಗ್‌ನ ಸಾಂಸ್ಕೃತಿಕ ಉತ್ಸವದಿಂದಾಗಿ ಯುಮನಾ ನದಿಯ ಪಶ್ಚಿಮ ಬಯಲುದಂಡೆಯ 120 ಎಕರೆ ಹಾಗೂ ಪೂರ್ವ ಎಡದಂಡೆಯ 50 ಹೆಕ್ಟೇರ್ ಪ್ರದೇಶದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆಯೆಂದು ಸಮಿತಿ ತಿಳಿಸಿದೆ.
ಆರ್ಟ್ ಆಫ್ ಲಿವಿಂಗ್ ಕಳೆದ ವರ್ಷ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವ ನಡೆಸಲು ಹಸಿರು ನ್ಯಾಯಾಧೀಕರಣ ಅನುಮತಿ ನೀಡಿತ್ತು. ಆದರೆ ಈ ಉತ್ಸವದ ವಿರುದ್ಧ ದೂರು ತನ್ನ ಮುಂದೆ ಬರುವ ಮೊದಲೇ ಕಾರ್ಯಕ್ರಮದ ಪೂರ್ವಸಿದ್ಧತೆಗಳು ಪೂರ್ಣಗೊಂಡಿರುವುದರಿಂದ ಅದನ್ನು ನಿಷೇಧಿಸಲು ತನ್ನ ಅಸಹಾಯಕತೆಯನ್ನು ಅದು ವ್ಯಕ್ತಪಡಿಸಿತ್ತು. ಆದಾಗ್ಯೂ ಕಾರ್ಯಕ್ರಮದಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಕ್ಕಾಗಿ 5 ಕೋಟಿ ರೂ. ಮಧ್ಯಂತರ ಪರಿಹಾರವನ್ನು ನೀಡುವಂತೆ ಅದು ಆರ್ಟ್ ಆಫ್ ಲಿವಿಂಗ್‌ಗೆ ಸೂಚಿಸಿತ್ತು.