‘ಕೊಡಿಯಾಲ ಶೂಟೌಟ್’ ಕನ್ನಡ ಸಿನಿಮಾದ ಚಿತ್ರಕಥೆಗೆ ಪೂಜೆ

ಮೂಡುಬಿದಿರೆ, ಎ.12: ಮುಚ್ಚೂರು ಕಲ್ಕುಡೆ ಪ್ರೊಡಕ್ಷನ್‌ನ ಚೊಚ್ಚಲ ಕನ್ನಡ ಸಿನಿಮಾ "ಕೊಡಿಯಾಲ ಶೂಟೌಟ್" ಚಿತ್ರಕಥೆಗೆ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪೂಜೆ ನಡೆಯಿತು. ಮಧೂರು ಜ್ಯೋತಿಷಿ ನಾರಾಯಣ ರಂಗ ಭಟ್ ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಚಿತ್ರದ ಚಿತ್ರಕಥೆಯ ಬಗ್ಗೆ ಮಾತನಾಡಿದ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಲೋಕೇಶ್ ಶೆಟ್ಟಿ, ಎಲ್ಲ ವರ್ಗದವರನ್ನು ಸೆಳೆಯುವ, ಕುಟುಂಬ ಸಮೇತ ನೋಡುವ ಸಿನಿಮಾ ಇದಾಗಿದ್ದು, ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುವ ಉದ್ದೇಶ ಚಿತ್ರತಂಡದ್ದು. ಹಣ ಗಳಿಸುವುದು ಚಿತ್ರದ ಉದ್ದೇಶವಲ್ಲ ಚಲನಚಿತ್ರ ಮಾಧ್ಯಮದ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನವೂ ಕೂಡ ಸಾಧ್ಯ ಎನ್ನುವುದನ್ನು ಸಾಬೀತು ಮಾಡಲು ಚಿತ್ರತಂಡ ಕಾರ್ಯಪ್ರವೃತ್ತವಾಗುತ್ತಿದೆ ಎಂದರು.
ಚಿತ್ರದ ಕಲಾವಿದರಾದ ಪ್ರತಾಪ್ ರೆಡ್ಡಿ, ರಿಯಾ, ಕಾರ್ಯನಿರ್ವಾಹಕ ನಿರ್ಮಾಪಕ ಜೆಹಾನ್ ಆಲಿ ಹಾಗೂ ಹಿಪ್‌ಹಾಪ್ ಸಂಗೀತಗಾರ ಜಸ್ಸಿಂ ಚಿತ್ರತಂಡದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಥೆಯೇ ನಾಯಕ: ಈ ಚಿತ್ರಕ್ಕೆ ಕಥೆಯೇ ಜೀವಾಳ, ಕಥೆಯ ಗಟ್ಟಿತನವೇ ಚಿತ್ರದ ಪ್ಲಸ್‌ಪಾಯಿಂಟ್. ಸತ್ಯ ಕಥೆಯನ್ನು ಆಧರಿಸಿ ಹೆಣೆದ ‘ಕೊಡಿಯಾಲ ಶೂಟೌಟ್’ ಕನ್ನಡದಲ್ಲಿ ವಿಭಿನ್ನ ಚಿತ್ರವೊಂದಾಗಿ ಮೂಡಿಬರಲಿದೆ ಎಂದು ನಿರ್ದೇಶಕರು ಈ ಸಂದರ್ಭ ಹೇಳಿದರು.







